ಟಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ'. ಈ ಚಿತ್ರದ ಮೇಲೆ ಸಿನಿ ಪ್ರೇಮಿಗಳು ಮುಗಿಲೆತ್ತರದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ಗಳು ಹಾಗೂ 'ದಮ್ ಮಸಾಲ' ಹಾಡಿನ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
'ಗುಂಟೂರು ಖಾರಂ' ತಯಾರಕರು 'ಓ ಮೈ ಬೇಬಿ' ಎಂಬ ಶೀರ್ಷಿಕೆಯ ಹಾಡಿನ ಬಿಡುಗಡೆ ದಿನಾಂಕವನ್ನು ಇಂದು ಅನಾವರಣಗೊಳಿಸಿದ್ದಾರೆ. ಚಿತ್ರದ ಮೊದಲ ಸಾಂಗ್ 'ದಮ್ ಮಸಾಲ'ಗೆ ಅಗಾಧ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಮುಂದಿನ ಹಾಡಿನ ಘೋಷಣೆಯು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ ಡಿಸೆಂಬರ್ 13 ರಂದು ಹಾಡನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದೆ. ಜೊತೆಗೆ ಡಿಸೆಂಬರ್ 11 ರಂದು ಹಾಡಿನ ಪ್ರೋಮೋವನ್ನು ರಿಲೀಸ್ ಮಾಡಲಾಗುವುದು ಎಂದು ಘೋಷಿಸಿದೆ. ಹೆಚ್ಚುವರಿಯಾಗಿ, ಈ ಅಪ್ಡೇಟ್ ಅನ್ನು ತಿಳಿಸಲು ಹೊಸ ಪೋಸ್ಟರ್ ಕೂಡ ಹಂಚಿಕೊಂಡಿದೆ. ನಾಯಕ ನಟಿ ಶ್ರೀಲೀಲಾ, ಮಹೇಶ್ ಬಾಬು ಕೆನ್ನೆಗೆ ಮುತ್ತಿಡುವ ಆಕರ್ಷಕ ಹೊಸ ಪೋಸ್ಟರ್ ಅನ್ನು ಕೈ ಬಿಡಲಾಗಿದೆ.
ಪೋಸ್ಟ್ ಅನ್ನು ಹಂಚಿಕೊಂಡಿರುವ ಚಿತ್ರ ತಯಾರಕರು, "ಒಂದು ಆನಂದಮಯ ಮಧುರವಾದ ಕಾಫಿ. ರೊಮ್ಯಾಂಟಿಕ್ ಸಂಖ್ಯೆ ಓ ಮೈ ಬೇಬಿಗೆ ಸ್ವಿಂಗ್ ಮಾಡಿ. ಗುಂಟೂರು ಖಾರಂ 2ನೇ ಸಿಂಗಲ್ ಪ್ರೋಮೋ ಡಿಸೆಂಬರ್ 11ರ ಸಂಜೆ 4.05ಕ್ಕೆ ಮತ್ತು ಪೂರ್ಣ ಹಾಡು ಡಿಸೆಂಬರ್ 13ರಂದು ಬಿಡುಗಡೆಯಾಗಲಿದೆ" ಎಂದು ತಿಳಿಸಿದ್ದಾರೆ.
ಮಹೇಶ್ ಬಾಬು ಅವರ 28ನೇ ಸಿನಿಮಾವಾದ 'ಗುಂಟೂರು ಖಾರಂ' ಚಿತ್ರೀಕರಣ ನಾನಾ ಕಾರಣಗಳಿಂದ ವಿಳಂಬವಾಗುತ್ತಾ ಬಂತು. ಅಂತಿಮವಾಗಿ, ಡಿಸೆಂಬರ್ ಮೊದಲ ವಾರದೊಳಗೆ ಶೂಟಿಂಗ್ ಪೂರ್ಣಗೊಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ಮಹೇಶ್ ಬಾಬು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು 'ಗುಂಟೂರು ಖಾರಂ' ವೀಕ್ಷಣೆಗೆ ಎದುರು ನೋಡುತ್ತಿದ್ದಾರೆ. ಏಕೆಂದರೆ ಇದು ಯಶಸ್ವಿ ನಟ-ನಿರ್ದೇಶಕ ಜೋಡಿ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದ ಬಹುನಿರೀಕ್ಷಿತ ಚಿತ್ರ.
ಕೊನೆಯದಾಗಿ 2010ರಲ್ಲಿ ಮೂಡಿಬಂದ ಖಲೇಜಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2005ರಲ್ಲಿ ಬಂದ ಅಥಡು ಸಿನಿಮಾದಲ್ಲಿ ಮೊದಲ ಬಾರಿಗೆ ಸಹಕರಿಸಿದ್ದರು. ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಜಯರಾಮ್, ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು ಮತ್ತು ರಮ್ಯಾ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.
ಆರಂಭದಲ್ಲಿ ಚಿತ್ರಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಶೂಟಿಂಗ್ಗೆ ಡೇಟ್ಸ್ ಕೊರತೆ ಹಿನ್ನೆಲೆಯಲ್ಲಿ ನಟಿ ಪ್ರಾಜೆಕ್ಟ್ನಿಂದ ದೂರ ಸರಿಯಬೇಕಾಯಿತು. ಪರಿಣಾಮ, ಕನ್ನಡತಿ ಶ್ರೀಲೀಲಾ ಮೈನ್ ಲೀಡ್ ರೋಲ್ ಆರಿಸಿಕೊಂಡರೆ, ಮೀನಾಕ್ಷಿ ಚೌಧರಿ ಎರಡನೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಎಸ್ ತಮನ್ ಸಂಗೀತ ಸಂಯೋಜನೆ, ರವಿ ಕೆ.ಚಂದ್ರನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಮುಂದಿನ ವರ್ಷ ಜನವರಿ 12 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: ಚಿರಂಜೀವಿ, ರಾಮ್ಚರಣ್ ಬಳಿಕ ನೆಟ್‌ಫ್ಲಿಕ್ಸ್ ಸಿಇಒ ಭೇಟಿಯಾದ ಮಹೇಶ್ ಬಾಬು