ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪ್ರಯತ್ನಿಸಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ತ್ರಿಶಾ ಕೃಷ್ಣನ್, ನಟಿ-ರಾಜಕಾರಣಿ ಖುಷ್ಬೂ ಸುಂದರ್ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನ್ಯಾಯಾಲಯಕ್ಕೆ ಅನುಮತಿ ಕೋರಿ ಮನ್ಸೂರ್ ಅಲಿ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು.
ತ್ರಿಶಾ ಕೃಷ್ಣನ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮನ್ಸೂರ್ ಅಲಿ ಖಾನ್ ವಿವಾದಕ್ಕೆ ಸಿಲುಕಿದ್ದರು. ಚಿತ್ರರಂಗದ ಹಲವರು ನಟನ ಹೇಳಿಕೆಯನ್ನು ಖಂಡಿಸಿದ್ದರು. ವಿವಾದ ಭುಗಿಲೆದ್ದ ಬೆನ್ನಲ್ಲೇ ನಟ ಸಾಮಾಜಿಕ ಜಾಲತಾಣದಲ್ಲಿ ತ್ರಿಶಾ ಬಳಿ ಕ್ಷಮೆಯಾಚಿಸಿದ್ದರು. ನಟಿ ಕೂಡ ಪರೋಕ್ಷವಾಗಿ ಕ್ಷಮಿಸಿದಂತೆ ತೋರಿತ್ತು. ಆದರೆ, ಕೆಲವು ದಿನಗಳ ಹಿಂದೆ ಮನ್ಸೂರ್ ಅಲಿ ಖಾನ್ ಅವರು ತ್ರಿಶಾ, ಖುಷ್ಬೂ ಮತ್ತು ಚಿರಂಜೀವಿ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ತಮ್ಮ ಹೇಳಿಕೆಯನ್ನು ಸೂಕ್ತವಾಗಿ ಪರಿಶೀಲಿಸದೇ ಈ ಮೂವರು ಸಾರ್ವಜನಿಕವಾಗಿ ನನ್ನ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ, ಮನ್ಸೂರ್ ಅಲಿ ಖಾನ್ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಮನ್ಸೂರ್ ಅಲಿ ಖಾನ್ಗೆ ಛೀಮಾರಿ ಹಾಕಿತ್ತು. ವಾಸ್ತವವಾಗಿ, ತ್ರಿಶಾ ಕೃಷ್ಣನ್ ಅವರು ತಮ್ಮ ಮಾನಹಾನಿಗಾಗಿ ಮೊಕದ್ದಮೆ ಹೂಡಬೇಕಾಗಿತ್ತು. ಆದರೆ ನಟ ಯಾವ ಆಧಾರದ ಮೇಲೆ ಮೊಕದ್ದಮೆ ಹೂಡಿದ್ದಾರೆ? ಎಂದು ಪ್ರಶ್ನಿಸಿ, ಮನ್ಸೂರ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಬಳಿಕ ತ್ರಿಶಾ, ಚಿರಂಜೀವಿ ಮತ್ತು ಖುಷ್ಬೂ ಅವರಿಂದ ಹೇಳಿಕೆಗಳನ್ನು ನಿರೀಕ್ಷಿಸಿ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಿತ್ತು. ಅದರಂತೆ, ಇಂದು ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ತ್ರಿಶಾ ಕೃಷ್ಣನ್, ಖುಷ್ಬೂ ಸುಂದರ್ ಮತ್ತು ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪ್ರಯತ್ನಿಸಿದ್ದಕ್ಕಾಗಿ ನಟನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿ ಎನ್.ಸತೀಶ್ ಕುಮಾರ್ ಅವರಿದ್ದ ಪೀಠ ಈ ಆದೇಶಿಸಿದೆ.
ಹಿನ್ನೆಲೆ: 62 ವರ್ಷದ ಮನ್ಸೂರ್ ಅಲಿ ಖಾನ್ ಲಿಯೋ ಚಿತ್ರದಲ್ಲಿ ತ್ರಿಶಾ ಜೊತೆ ನಟಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ, ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇಲ್ಲದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿ, ವಿವಾದಕ್ಕೆ ಸಿಲುಕಿದ್ದರು. ತ್ರಿಶಾ ಇನ್ನು ಮುಂದೆ ಈ ನಟನೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಚಿರಂಜೀವಿ, ಖುಷ್ಬೂ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ನಟನ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ತ್ರಿಶಾ, ಚಿರಂಜೀವಿ ಸೇರಿ ಮೂವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ ಮನ್ಸೂರ್ ಅಲಿಖಾನ್