ಕಂಟೆಂಟ್ ಇರುವ ಸಿನಿಮಾಗಳಿಗೆ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಮಾತು ಈಗ ಲವ್ 360 ಸಿನಿಮಾ ವಿಷಯದಲ್ಲಿ ನಿಜವಾಗಿದೆ. ಹೌದು, ಕನ್ನಡ ಸಿನಿಮಾಗಳು ನಮ್ಮ ಭಾಷೆ ಮಾತ್ರ ಅಲ್ಲದೇ ಪರಭಾಷೆಯಲ್ಲೂ ಸದ್ದು ಮಾಡುತ್ತಿವೆ. ಹಾಗಂತ ಕೇವಲ ಹೈ ಬಜೆಟ್ ಸಿನಿಮಾಗಳೇ ಸದ್ದು ಮಾಡುತ್ತಿವೆ ಅಂತಾ ಅಲ್ಲ. ಉತ್ತಮ ಕಂಟೆಂಟ್ ಇರುವ ಹೊಸ ಪ್ರತಿಭೆಗಳ ಹಾಗು ಕಡಿಮೆ ಬಜೆಟ್ ಚಿತ್ರಗಳು ಕೂಡ ಪರಭಾಷೆ ಜನರ ಮನಸ್ಸನ್ನು ಕದಿಯುತ್ತಿವೆ.
ಹೌದು, ಇದೇ ತಿಂಗಳು 19ರಂದು ರಾಜ್ಯಾದ್ಯಂತ ಬಿಡುಗಡೆಯಾದ ಲವ್ 360 ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಲವ್ 360 ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕ ಶಶಾಂಕ್ ಒಂದು ಮುಗ್ಧ ಪ್ರೇಮಕಥೆಯನ್ನು ಬೆಳ್ಳಿ ತೆರೆ ಮೇಲೆ ತರುವ ಪ್ರಯತ್ನ ಮಾಡಿದರು. ಈ ಮಧ್ಯೆ ಲವ್ 360 ಚಿತ್ರತಂಡ ಈ ಸಿನಿಮಾ ಬೇರೆ ಭಾಷೆಗಲ್ಲೂ ರಿಮೇಕ್ ಆಗುತ್ತಿದೆ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ.
ತೆಲುಗು ಮತ್ತು ತಮಿಳಿನಲ್ಲಿ ಲವ್ 360 ಸಿನಿಮಾವನ್ನು ರಿಮೇಕ್ ಮಾಡಲು ಖ್ಯಾತ ನಿರ್ಮಾಣ ಸಂಸ್ಥೆಯೊಂದು ಮುಂದೆ ಬಂದಿದೆಯಂತೆ. ಈ ವಿಚಾರವನ್ನು ನಿರ್ದೇಶಕ ಶಶಾಂಕ್ ಹಂಚಿಕೊಂಡಿದ್ದಾರೆ. ಆದರೆ ನಿರ್ದೇಶಕ ಯಾರು, ಯಾವ ನಿರ್ಮಾಣ ಸಂಸ್ಥೆ ಎಂಬುದರ ಬಗ್ಗೆ ನಿರ್ದೇಶಕರು ಮಾಹಿತಿ ಬಿಟ್ಟುಕೊಟ್ಟಿಲ್ಲ. ನಿರ್ದೇಶಕ ಶಶಾಂಕ್ ಯುವ ನಟ ಪ್ರವೀಣ್ ಹಾಗು ಯುವ ನಟಿ ರಚನಾ ಜೋಡಿಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಿದರು.
ಮಿಸ್ಟರಿ ಕಥೆ ಜೊತೆ ಅಚ್ಚರಿ: ಇನ್ನು, ಲವ್ 360 ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳಲು ಚಿತ್ರದ ಹಾಡು ಮತ್ತು ಗಟ್ಟಿತನದ ಸ್ಕ್ರೀನ್ ಪ್ಲೇ ಕಾರಣವಾಗಿದೆ. ಈ ಚಿತ್ರದಲ್ಲಿ ಬರುವ 'ಜಗವೇ ನೀನು ಗೆಳತಿಯೇ' ಹಾಡು ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಜನ ನೋಡಿ ಮೆಚ್ಚಿಕೊಂಡಿದ್ದರು. ಚಿತ್ರಮಂದಿರಕ್ಕೆ ಜನರನ್ನು ಕರೆತರುವಲ್ಲಿ ಈ ಹಾಡಿನ ಪಾತ್ರ ದೊಡ್ಡದಿದೆ. ಲವ್ ಸ್ಟೋರಿ ನೋಡಲು ಬಂದ ಪ್ರೇಕ್ಷಕರಿಗೆ ಒಂದು ಮರ್ಡರ್ ಮಿಸ್ಟರಿ ಕಥೆ ಜೊತೆ ಅಚ್ಚರಿ ಮೂಡಿಸಿತ್ತು. ಹೀಗಾಗಿ ಈ ಚಿತ್ರಕ್ಕೆ ಪರಭಾಷೆ ಸಿನಿಮಾ ಮಂದಿ ಮನಸೋತಿದ್ದು, ರಿಮೇಕ್ ಮಾಡಲು ಮುಂದೆ ಬಂದಿದ್ದಾರೆ ಎನ್ನಲಾಗ್ತಿದೆ.
ಎಲ್ಲರಿಂದ ಮೆಚ್ಚುಗೆ: ಲವ್ ಸ್ಟೋರಿ ಕಥೆ ಆಧರಿಸಿ ಬಂದ ಲವ್ 360 ಸಿನಿಮಾದಲ್ಲಿ ಯುವ ನಟ ಪ್ರವೀಣ್ ಅಭಿನಯದಲ್ಲಿ ಗಮನ ಸೆಳೆದಿದ್ದು, ರಚನಾ ಇಂದರ್ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಕಾವ್ಯಾ ಶಾಸ್ತ್ರಿ, ಗೋಪಾಲ ದೇಶಪಾಂಡೆ, ಮಸಲ್ ಮಣಿ, ಸುಜಿತ್, ಡ್ಯಾನಿ ಕುಟ್ಟಪ್ಪ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶಕ ಶಶಾಂಕ್ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.
ಓದಿ: ಓಂ ನಟ ಹರೀಶ್ ರೈ ಕಷ್ಟಕ್ಕೆ ಸ್ಪಂದಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್