ಬೆಂಗಳೂರು: ದಕ್ಷಿಣ ಭಾರತದ ಹಿರಿಯ ನಟಿ ಲೀಲಾವತಿ ಇಂದು (ಡಿ.8, 2003) ನಮ್ಮನ್ನಗಲಿದ್ದಾರೆ. ಕನ್ನಡದಲ್ಲಿಯೇ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಇವರು ಅತ್ಯಂತ ಪ್ರಬುದ್ಧ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ. ಇವರು ನಟಿಸಿದ ಬಹುಕಾಲ ಸ್ಮರಣೆಯಲ್ಲಿ ಉಳಿಯುವಂಥ ಕೆಲ ಅತ್ಯುತ್ತಮ ಚಲನಚಿತ್ರಗಳ ಮಾಹಿತಿ ಇಲ್ಲಿದೆ.
ಭಕ್ತ ಕುಂಬಾರ: 1974ರಲ್ಲಿ ಬಂದ ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದರು. ಇದರಲ್ಲಿ ಲೀಲಾವತಿಯವರು ಡಾ.ರಾಜ್‌ಕುಮಾರ್ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಭಕ್ತ ಕುಂಬಾರ ಚಿತ್ರಕ್ಕೆ 1974-75ನೇ ಸಾಲಿನ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಅಲ್ಲದೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು.
ಮನ ಮೆಚ್ಚಿದ ಮಡದಿ: 1963ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್, ಉದಯಕುಮಾರ್ ಹಾಗೂ ಬಾಲಕೃಷ್ಣ ಇದ್ದರು.
ಸಂತ ತುಕಾರಾಂ: 1963ರಲ್ಲಿ ಬಿಡುಗಡೆಯಾದ ಈ ಚಲನಚಿತ್ರ ಲೀಲಾವತಿಯವರು ನಟಿಸಿದ ಸ್ಮರಣೀಯ ಚಿತ್ರಗಳಲ್ಲೊಂದಾಗಿದೆ. ಸುಂದರ್ ರಾವ್ ನಾಡಕರ್ಣಿ ಈ ಚಿತ್ರ ನಿರ್ದೇಶಿಸಿದ್ದರು. ರಾಜಕುಮಾರ್, ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವಥ್, ಶಿವಾಜಿ ಗಣೇಶನ್ ಮತ್ತು ಟಿ.ಎನ್.ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ರಣಧೀರ ಕಂಠೀರವ: ಐತಿಹಾಸಿಕ ಕಥಾಹಂದರ ಹೊಂದಿದ್ದ ರಣಧೀರ ಕಂಠೀರವ ಚಲನಚಿತ್ರ 1960ರಲ್ಲಿ ಬಿಡುಗಡೆಯಾಗಿತ್ತು. ರಾಜಕುಮಾರ್, ಲೀಲಾವತಿ ಉದಯಕುಮಾರ್, ವೀರಭದ್ರಪ್ಪ, ಸಂಧ್ಯಾ, ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆರ್.ನಾಗೇಂದ್ರರಾವ್ ಪ್ರಮುಖ ಪಾತ್ರವರ್ಗದಲ್ಲಿ ನಟಿಸಿದ್ದರು.
ರಾಣಿ ಹೊನ್ನಮ್ಮ: 1960ರಲ್ಲಿ ಬಿಡುಗಡೆಯಾದ ಈ ಚಿತ್ರ ಐತಿಹಾಸಿಕ ನಾಟಕ ಆಧಾರಿತ ಚಲನಚಿತ್ರವಾಗಿದೆ. ಇದನ್ನು ಕೆ.ಆರ್.ಸೀತಾರಾಮ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಗೆಜ್ಜೆ ಪೂಜೆ: 1970ರಲ್ಲಿ ಬಿಡುಗಡೆಯಾದ ಗೆಜ್ಜೆಪೂಜೆ ಕನ್ನಡದ ಖ್ಯಾತ ಲೇಖಕಿ ಎಂ.ಕೆ.ಇಂದಿರ ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರವಾಗಿದೆ. ಜನಪ್ರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇದನ್ನು ನಿರ್ದೇಶಿಸಿದ್ದಾರೆ. ಕಲ್ಪನಾ, ಗಂಗಾಧರ್, ಬಾಲಕೃಷ್ಣ, ಆರತಿ, ವಜ್ರಮುನಿ, ಅಶ್ವಥ್, ಲೋಕನಾಥ್, ಲೀಲಾವತಿ, ಪಂಡರೀಬಾಯಿ, ಸಂಪತ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿಪಾಯಿ ರಾಮು: 1972ರಲ್ಲಿ ಬಂದ ಈ ಚಿತ್ರವನ್ನು ವೈಆರ್ ಸ್ವಾಮಿ ನಿರ್ದೇಶಿಸಿದ್ದಾರೆ. ಇದರಲ್ಲಿ ರಾಜ್‌ಕುಮಾರ್, ಲೀಲಾವತಿ ಮತ್ತು ಆರತಿ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಕೆ.ಎಸ್.ಅಶ್ವಥ್, ಶಿವರಾಂ, ವಜ್ರಮುನಿ ಮತ್ತು ತೂಗುದೀಪ ಶ್ರೀನಿವಾಸ್ ನಟಿಸಿದ್ದಾರೆ. ಇದು 1971-72ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಲೀಲಾವತಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.