ಪೋಸ್ಟರ್ ಹಾಗೂ ಟೀಸರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ 'ಕ್ಷೇತ್ರಪತಿ'. ಗುಲ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಅಭಿನಯದ 'ಕ್ಷೇತ್ರಪತಿ' ಟ್ರೇಲರ್ ಬಿಡುಗಡೆ ಆಗಿದ್ದು ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ನವೀನ್ ಶಂಕರ್, "ಗುಲ್ಟು ಸಿನಿಮಾ ನಂತರ ನಿರ್ದೇಶಕ ಶ್ರೀಕಾಂತ್ ಕಟಗಿ ಅವರು ಈ ಚಿತ್ರದ ಕಥೆ ಹೇಳಿದರು. ನಾನು ಉತ್ತರ ಕರ್ನಾಟಕದವನೇ ಆಗಿರುವುದರಿಂದ ಅಲ್ಲಿನ ಪರಿಸರದ ಚಿತ್ರ ಮಾಡುವ ಆಸೆಯಿತ್ತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ. ಆದರೆ ಹಣ ಹೂಡಲು ನಿರ್ಮಾಪಕರು ಇರಲಿಲ್ಲ. ನಾವೇ ಒಂದೊಂದು ಲಕ್ಷ ರೂಪಾಯಿ ಹಾಕಿ ಸಿನಿಮಾ ಆರಂಭ ಮಾಡಿದೆವು. ಆನಂತರ ಸಾಕಷ್ಟು ನಿರ್ಮಾಪಕರು ನಮ್ಮ ಜೊತೆಯಾದರು. ಆಗಷ್ಟೇ 'ಕೆಜಿಎಫ್' ಬಿಡುಗಡೆ ಆಗಿತ್ತು. ರವಿ ಬಸ್ರೂರ್ ಅವರ ಬಳಿ ಸಂಗೀತ ಸಂಯೋಜನೆ ಮಾಡಿಸಬೇಕೆಂಬ ಆಸೆ ಇತ್ತು, ಅವರೂ ಕೂಡ ಒಪ್ಪಿಕೊಂಡರು. ಹೀಗೆ ಆರಂಭವಾದ ಚಿತ್ರ ಸದ್ಯ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ನನ್ನೊಂದಿಗೆ ಅಭಿನಯಿಸಿರುವ ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ" ಎಂದು ತಿಳಿಸಿದರು.
ನಿರ್ದೇಶಕ ಶ್ರೀಕಾಂತ್ ಕಟಗಿ ಮಾತನಾಡಿ, "ನಾನು ಉತ್ತರ ಕರ್ನಾಟಕ ಮೂಲದವನು. ಅಲ್ಲಿನ ಹಾಗೂ ಇಡೀ ದೇಶದಲ್ಲೇ ಇರುವ ಸಾಮಾಜಿಕ ಸಮಸ್ಯೆಗಳನ್ನು ಆಧರಸಿ ಕಥೆ ಮಾಡಿಕೊಂಡೆ. ನವೀನ್ ಶಂಕರ್ ಅವರಿಗೆ ಕಥೆ ಹೇಳಿದೆ. ಅವರು ಒಪ್ಪಿಕೊಂಡರು. ಉತ್ತರ ಕರ್ನಾಟಕದ ಭಾಗದಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ" ಎಂದು ಮಾಹಿತಿ ಹಂಚಿಕೊಂಡರು.
ಹೊಂದಿಸಿ ಬರೆಯಿರಿ ಚಿತ್ರದ ಬಳಿಕ ನವೀನ್ ಜೊತೆ ಮತ್ತೆ ಸ್ಕ್ರೀನ್ ಹಂಚಿಕೊಂಡಿರುವ ಅರ್ಚನಾ ಜೋಯಿಸಾ ಮಾತನಾಡಿ, "ಪತ್ರಕರ್ತೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು. ಹಾಗೇ ನಟರಾದ ರಾಹುಲ್ ಐನಾಪುರ, ಹರ್ಷ್ ಅರ್ಜುನ್ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಸಿನಿಮಾಗೆ ಬೆಂಬಲಿಸುವಂತೆ ಕೋರಿದರು. ಸಹ ನಿರ್ಮಾಪಕರಾದ ಶ್ರೀನಿವಾಸ್, ದರ್ಶನ್ ಜಯಣ್ಣ, ವಿವೇಕ್ ಅವರು 'ಕ್ಷೇತ್ರಪತಿ' ಚಿತ್ರ ಜನಮನ ಸೆಳೆಯಲಿದೆ" ಎಂದು ತಿಳಿಸಿದರು.
ನವೀನ್ ಶಂಕರ್, ಅರ್ಚನಾ ಜೋಯಿಸ್ ಅಲ್ಲದೇ ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಜಿಂದಾ ಬಂದಾ ಮೇಕಿಂಗ್ ವಿಡಿಯೋ: ಎಸ್ಆರ್ಕೆ ಅಪ್ಪಿಕೊಂಡ ಅಟ್ಲೀ - ಸೌತ್, ಬಾಲಿವುಡ್ ಕಾಂಬೋದಲ್ಲಿ 'ಜವಾನ್' ರೆಡಿ
ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ರವಿ ಬಸ್ರೂರ್ ಮ್ಯೂಸಿಕ್ ಆ್ಯಂಡ್ ಮೂವೀಸ್ ಅರ್ಪಿಸಲಿದೆ. ಸಿನಿಮಾ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಬಿಡುಗಡೆ ಮಾಡುತ್ತಿದೆ. ವೈ.ವಿ.ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನವಿದೆ. 'ಕ್ಷೇತ್ರಪತಿ' ಆಗಸ್ಟ್ 18 ರಂದು ತೆರೆಗೆ ಬರಲಿದೆ.