ವಿಭಿನ್ನ ಮ್ಯಾನರಿಸಂನಿಂದಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ ಕೋಮಲ್ ಕುಮಾರ್. ಕೆಲ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು. ಹಾಸ್ಯದ ಮೂಲಕ ಜನರನ್ನು ಮನರಂಜಿಸುತ್ತಿದ್ದ ನಟನನ್ನು ಮತ್ತೆ ತೆರೆಮೇಲೆ ನೋಡಲು ಪ್ರೇಕ್ಷಕರು ಬಯಸಿದ್ದರು. ಅದರಂತೆ, 'ಕಾಲಾಯ ನಮಃ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕೋಮಲ್ ಕುಮಾರ್ ಕಮ್ ಬ್ಯಾಕ್ ಮಾಡಿದ್ದಾರೆ. ರೋಲೆಕ್ಸ್ ಹಾಗೂ ಎಲಾಕುನ್ನಿ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಕೋಮಲ್ ಅವರೀಗ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೌದು, ಕೋಮಲ್ ಕುಮಾರ್ ಮುಖ್ಯಭೂಮಿಕೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾಗೆ 'ಕೋಣ' ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ಡಾರ್ಕ್ ಕಾಮಿಡಿ ಜಾನರ್ನ ಕೋಣ ಚಿತ್ರವನ್ನು ಈ ಹಿಂದೆ ಜಗ್ಗೇಶ್ ಅವರ 8MM ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ.

ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಕೋಮಲ್ ಕುಮಾರ್ ಅವರು ಈವರೆಗೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಆನೆ, ಶ್ವಾನ, ಕೋತಿ ಸೇರಿ ಮೊದಲಾದ ಪ್ರಾಣಿಗಳನ್ನು ಬಳಸಿಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಈ ಚಿತ್ರದಲ್ಲಿ "ಕೋಣ"ವನ್ನು ಮುಖ್ಯ ಪಾತ್ರವಾಗಿ ಬಳಸಿಕೊಳ್ಳಲಾಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. 2024ರ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಅವರು ತಿಳಿಸಿದ್ದಾರೆ.
ತೇಜ್ವಿನ್ ಪ್ರೊಡಕ್ಷನ್ ಲಾಂಛನದಲ್ಲಿ ವಿನೋದ್ ಕುಮಾರ್ ಹಾಗೂ ಸೆಲ್ವನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಕುಮಾರ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಂಜಯ್ ಹಾಗೂ ಉತ್ತಮ್ ಸ್ವರೂಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.
ಇದನ್ನೂ ಓದಿ: ''ಇದು ಬರಿ ಬೆಳಕಲ್ಲ, ದರ್ಶನ'': ಕಾಂತಾರ ಪ್ರೀಕ್ವೆಲ್ ಫಸ್ಟ್ ಲುಕ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಿಷಬ್
''ಯಲಾಕುನ್ನಿ'' ನಟ ಕೋಮಲ್ ಕುಮಾರ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಅನಾವರಗೊಂಡಿರುವ ಸಿನಿಮಾದ ಫಸ್ಟ್ ಲುಕ್ನಲ್ಲಿ ಕೋಮಲ್ ಅವರು ನಟ ವಜ್ರಮುನಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. "ಮೇರಾ ನಾಮ್ ವಜ್ರಮುನಿ" ಎಂಬ ಅಡಿಬರಹ ಕೂಡ ಇದೆ. ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಹೆಚ್ಚುವಂತೆ ಮಾಡಿದೆ. ಕೋಮಲ್ ಸಹೋದರ ಜಗ್ಗೇಶ್ ಪುತ್ರ ಯತಿರಾಜ್ ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಸಹ ಈ ಯಲಾಕುನ್ನಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಮಗಳಿಗೆ 50 ಕೋಟಿ ಮೌಲ್ಯದ ಬಂಗಲೆ ಉಡುಗೊರೆಯಾಗಿ ಕೊಟ್ಟ ಬಿಗ್ ಬಿ