ಡಾಲಿ ಧನಂಜಯ್ ಚಂದನವನ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲೂ ತನ್ನ ನಟನೆಯಿಂದಲೇ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಆಕ್ಟಿಂಗ್ ಜೊತೆಗೆ ಹೊಸ ಪ್ರತಿಭೆಗಳ ಚಿತ್ರಗಳನ್ನು ಕೂಡ ನಿರ್ಮಾಣ ಮಾಡುತ್ತಿರುವ ಧನಂಜಯ್ ಇದೀಗ ಗುರುದೇವ್ ಹೊಯ್ಸಳನಾಗಿ ಬೆಳ್ಳಿ ತೆರೆಮೇಲೆ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಸದ್ಯ ಟೀಸರ್ ಹಾಗೂ ಹಾಡುಗಳಿಂದಲೇ ಕುತೂಹಲ ಮೂಡಿಸಿರುವ ಗುರುದೇವ್ ಹೊಯ್ಸಳ ಚಿತ್ರದ ಆಫೀಶಿಯಲ್ ಟ್ರೇಲರ್ ಅನಾವರಣ ಕಾರ್ಯಕ್ರಮವು ಖಾಸಗಿ ಹೋಟೇಲ್ವೊಂದರಲ್ಲಿ ನಡೆಯಿತು.
ಈ ವೇಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನ್ನು ಅನಾವರಣಗೊಳಿಸಿದರು. ಟ್ರೇಲರ್ನಲ್ಲಿ ಡಾಲಿ ಧನಂಜಯ್ ಒಬ್ಬ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಒಂದು ಜಿಲ್ಲೆಯಲ್ಲಿ ನಡೆಯುವ ಅನ್ಯಾಯ ಹಾಗೂ ದೌರ್ಜನ್ಯಗಳನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಇದರಲ್ಲಿದೆ. ಈ ಕಥೆಯು ಬೆಳಗಾವಿಯಲ್ಲಿನ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಸುತ್ತುತ್ತದೆ.
ಈ ಸಿನಿಮಾ ವಿಶೇಷ ಏನಪ್ಪಾ ಅಂದ್ರೆ, ಇದರಲ್ಲಿ ಆಕ್ಷನ್ ಸೀನ್ಗಳಿವೆ. ಅಲ್ಲದೇ ಸುಂದರ ಪ್ರೀತಿ ಕಥೆಯನ್ನು ಹೆಣೆಯಲಾಗಿದೆ. ಜೊತೆಗೆ ಸಮಾಜಕ್ಕೊಂದು ಸಂದೇಶವು ಇದೆ. ಇದರಲ್ಲಿ ಧನಂಜಯ್ ನಿಜಕ್ಕೂ ಗುರುದೇವ್ ಹೊಯ್ಸಳನಾಗಿ ಆರ್ಭಟಿಸಿದ್ದಾರೆ. ಅಮೃತಾ ಅಯ್ಯಂಗಾರ್ ಡಾಲಿ ಪ್ರೇಯಸಿಯಾಗಿ ಗಮನ ಸೆಳೆಯುತ್ತಾರೆ. ಇನ್ನು ಕೆಜಿಎಫ್ ಖ್ಯಾತಿಯ ಅವಿನಾಶ್, ಗುಲ್ಟು ಖ್ಯಾತಿಯ ನವೀನ್ ಶಂಕರ್ ಈ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪ್ರತಾಪ್ ನಾರಾಯಣ್, ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ ಇದ್ದಾರೆ. ರತ್ನನ್ ಪ್ರಪಂಚ ಸಿನಿಮಾದ ಬಳಿಕ ಕೆಆರ್ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಧನಂಜಯ್ ಜೊತೆ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ಈ ಬಗ್ಗೆ ಮಾತನಾಡಿದ ಧನಂಜಯ್, "ನಾನು ಮೈಸೂರಿನಲ್ಲಿ ಓದುತ್ತಿರುವಾಗ ಹಾಸ್ಟೆಲ್ನಲ್ಲಿ ಇರುತ್ತಿದ್ದೆವು. ಆಗ ಸುದೀಪ್ ಸರ್ ನಟನೆಯ ಹುಚ್ಚ ಸಿನಿಮಾವನ್ನು ನೋಡಿದ್ದೆ. ಇವತ್ತು ನನ್ನ ಸಿನಿಮಾದ ಟ್ರೇಲರ್ ಲಾಂಚ್ ಮಾಡೋದಿಕ್ಕೆ ಅವರೇ ಬಂದಿದ್ದಾರೆ. ಅವರು ಯುವ ನಟರಿಗೆ ಸ್ಪೂರ್ತಿಯಾಗಿದ್ದಾರೆ, ಆ ವಿಷ್ಯದಲ್ಲಿ ನಾನು ಕೂಡ ಲಕ್ಕಿ" ಎಂದರು. ಬಳಿಕ ನಾವು ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಆಹ್ವಾನ ನೀಡಲು ಅವರ ಮನೆಗೆ ಹೋಗಿದ್ದೆವು. ಅವರು ಹೇಗೆ ಅಣ್ಣನ ಸ್ಥಾನದಲ್ಲಿ ನಿಂತು ಸಹಾಯ ಮಾಡ್ತಾರೆ ಅನ್ನೋದಿಕ್ಕೆ ಒಂದು ಉದಾಹರಣೆಯನ್ನು ನೀಡಿದರು.
"ನಾನು ಅವರ ಮನೆಗೆ ಹೋದಾಗ ನೀನು ಪೊಲೀಸ್ ಪಾತ್ರಕ್ಕಾಗಿ ಯಾಕೆ ಮೀಸೆ ಬಿಟ್ಟಿಲ್ಲ ಎಂದು ಪ್ರಶ್ನಿಸಿದರು. ಅದು ನನ್ನ ಮುಖಕ್ಕೆ ಸೂಟ್ ಆಗಲಿಲ್ಲ ಸರ್ ಅಂದೆ. ಅಷ್ಟರಲ್ಲಿ ಅವರೇ ಐದರಿಂದ ಹತ್ತು ನಿಮಿಷದಲ್ಲಿ ನನ್ನ ಫೋಟೋಗೆ ಮೀಸೆ ಸ್ಕೆಚ್ ಮಾಡಿ ನನಗೆ ತೋರಿಸಿ ಚೆನ್ನಾಗಿ ಕಾಣುತ್ತಿದ್ದೀರಾ ಎಂದರು. ಆ ಕ್ಷಣಕ್ಕೆ ನಾನು ನಿಜಕ್ಕೂ ಬಾವುಕನಾದೆ. ನನ್ನ ಅಣ್ಣನ ಸ್ಥಾನದಲ್ಲಿ ನಿಂತು ಅವರು ಯೋಚನೆ ಮಾಡಿದ್ದು, ನಿಜಕ್ಕೂ ಅವರ ದೊಡ್ಡ ಗುಣ" ಎಂದರು.
ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್ ಆರೋಪ: ನಟ ಚೇತನ್ ಬಂಧನ
ಇನ್ನು ಟ್ರೇಲರ್ ಲಾಂಚ್ ಮಾಡಿ ಮಾತನಾಡಿದ ಕಿಚ್ಚ ಸುದೀಪ್," ನಿಜಕ್ಕೂ ಗುರುದೇವ ಹೊಯ್ಸಳ ಟ್ರೇಲರ್ ಅದ್ಭುತವಾಗಿದೆ. ಹೊಯ್ಸಳ ಚಿತ್ರದಲ್ಲಿ ಧನಂಜಯ್ ಫಿಟ್ ಅಂಡ್ ಫೈನ್ ಆಗಿ ಕಾಣಿಸುತ್ತಿದ್ದಾರೆ. ಆದರೆ ಮೀಸೆ ಬಿಟ್ಟಿದ್ದರೆ ಇನ್ನು ಚೆನ್ನಾಗಿ ಕಾಣುತ್ತಿದ್ದರು. ಧನಂಜಯ್ನಲ್ಲಿ ಏನಾದರೂ ಮಾಡಲೇಬೇಕೆಂಬ ಹಠವಿದೆ. ಹೀಗಾಗಿಯೇ ನನಗವರು ತುಂಬಾನೇ ಇಷ್ಟವಾಗುತ್ತಾರೆ. ನನಗೆ ಕಾರ್ತಿಕ್ ಮತ್ತು ಯೋಗಿ ಜೊತೆ ಒಂದೊಳ್ಳೆ ಗೆಳೆತನವಿದೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಬಂದೆ" ಎಂದು ಹೇಳಿದರು. ಇದೇ ವೇಳೆ ಧನಂಜಯ್ಗೆ ಕಿಚ್ಚ ಸುದೀಪ್, ಅಮೃತಾ ಅಯ್ಯಂಗಾರ್ ನಿಮ್ಮ ಬಗ್ಗೆ ಅಷ್ಟೊಂದು ಹೊಗಳಿದರು. ನೀವು ಮಾತ್ರ ಅಮೃತಾ ಬಗ್ಗೆ ಒಂದು ಒಳ್ಳೆ ಮಾತು ಆಡಲಿಲ್ಲ" ಎಂದು ಕಾಲೆಳೆದರು.
ಡಾಲಿ ಧನಂಜಯ್ ಅವರ 25ನೇ ಸಿನಿಮವಾಗಿರುವ ಗುರುದೇವ್ ಹೊಯ್ಸಳಕ್ಕೆ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾ ಮಾಡಿರುವ ನಟರ ಪಟ್ಟಿಯಲ್ಲಿ ಧನಂಜಯ್ ಕೂಡ ಮುಂಚೂಣಿಯಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ ಚಿತ್ರಕ್ಕಿದೆ. ಗುರುದೇವ್ ಹೊಯ್ಸಳ ಸಿನಿಮಾ ಇದೇ 30ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ: "ದಸರಾ" ಚಿತ್ರತಂಡಕ್ಕೆ ಚಿನ್ನದ ನಾಣ್ಯ ಗಿಫ್ಟ್ ನೀಡಿದ ನಟಿ ಕೀರ್ತಿ ಸುರೇಶ್! ಯಾಕೆ ಗೊತ್ತಾ?