ಹೈದರಾಬಾದ್: ಕೆಜಿಎಫ್ ಸಿನಿಮಾದ ಯಶಸ್ಸಿನ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಕನ್ನಡದ ಸ್ಟಾರ್ ನಟ ಯಶ್ ಈಗ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಅವರು ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ರಾಮಾಯಣ ಸಿನಿಮಾಕ್ಕೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಈ ಸಿನಿಮಾಕ್ಕೆ ಯಶ್ ಬರೋಬ್ಬರಿ 100 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರದಂಡದ ಪ್ರಕಾರ, ನಿರ್ದೇಶಕ ತಿವಾರಿ ಅವರು ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್, ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ, ರಾವಣನ ಪಾತ್ರಕ್ಕೆ ಯಶ್ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಕೆಜಿಎಫ್ ಮೂರನೇ ಭಾಗ ಯಶ್ ಕೈಯಲ್ಲಿದ್ದರೂ, ಬಾಲಿವುಡ್ಗೆ ಪದಾರ್ಪಣೆ ಮಾಡಲು ಯಶ್ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆಂದು ಯಶ್ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ಯಶ್ 100 ರಿಂದ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಕನಿಷ್ಠ 100 ಕೋಟಿ ರೂ.ಗಳು ಮತ್ತು ಚಿತ್ರೀಕರಣದ ದಿನಗಳ ಸಂಖ್ಯೆ ಮತ್ತು ಯಶ್ ಅವರ ಕಾಲ್ಶೀಟ್ ಅವಲಂಬಿಸಿ ಸಂಭಾವನೆ ಅಂತಿಮಗೊಳಿಸಲಾಗುವುದು ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
ಕೆಜಿಎಫ್ 3ನೇ ಭಾಗ 2025 ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಮುಂಬರುವ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಕೆಜಿಎಫ್‌ನಲ್ಲಿನ ಅವರ ಪಾತ್ರಕ್ಕೆ ಹೋಲಿಸಿದರೆ ರಾಮಾಯಣದಲ್ಲಿ ಅವರು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾಗೆ ಅಗತ್ಯವಾಗಿರುವ ದೈಹಿಕ ಆಕಾರದ ಬಗ್ಗೆ ಚಿತ್ರ ತಂಡದ ಜೊತೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಹೀಗಾಗಿ ಯಶ್ ರಾಮಾಯಣ ಸಿನಿಮಾದಲ್ಲಿ ಅಬ್ಬರಿಸಲು ತಮ್ಮ ಮೈಕಟ್ಟಿನ ಬಗ್ಗೆ ಶ್ರದ್ಧೆ ವಹಿಸಿದ್ದಾರೆ.
ಇದನ್ನೂ ಓದಿ: ಯಶ್ ಕುರಿತು ಟಾಲಿವುಡ್ ನಟ ರವಿತೇಜ ಹೇಳಿಕೆಗೆ ಅಭಿಮಾನಿಗಳ ಅಸಮಾಧಾನ
ಶ್ರೀರಾಮನ ಪಾತ್ರಕ್ಕಾಗಿ ಮದ್ಯ, ಮಾಂಸ ತ್ಯಜಿಸಲು ಸಜ್ಜಾದ ರಣ್‌ಬೀರ್ ಕಪೂರ್: ಇನ್ನು ಭಗವಾನ್ ಶ್ರೀರಾಮನ ಪಾತ್ರಕ್ಕಾಗಿ ಶುದ್ಧತೆಯನ್ನು ಅನುಸರಿಸಲು ರಣ್‌ಬೀರ್ ಕಪೂರ್ ಮದ್ಯ, ಮಾಂಸ ತ್ಯಜಿಸಲು ಸಿದ್ಧರಾಗಿದ್ದಾರೆ. ಮದ್ಯ ಮತ್ತು ಮಾಂಸವನ್ನು ತ್ಯಜಿಸುವ ರಣ್‌ಬೀರ್ ಕಪೂರ್ ನಿರ್ಧಾರವು ಆರೋಗ್ಯ ಕಾಳಜಿ ಅಥವಾ ಪಬ್ಲಿಕ್ ಇಮೇಜ್ ಹಿನ್ನೆಲೆಯಿಂದ ಪ್ರೇರೇಪಿಸಲ್ಪಟ್ಟಿಲ್ಲ. ಭಗವಾನ್ ಶ್ರೀರಾಮನ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುವ ಜವಾಬ್ದಾರಿಗಾಗಿ ನಟ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣಗೊಳ್ಳಲಿದೆ. ಮೊದಲ ಭಾಗ ರಾಮ ಮತ್ತು ಸೀತೆಯ ಕಥೆಯನ್ನು ಒಳಗೊಂಡಿರುತ್ತದೆ. ಚಿತ್ರದ ವಿಎಫ್ಎಕ್ಸ್ ಕೆಲಸಕ್ಕಾಗಿ ಆಸ್ಕರ್ ವಿಜೇತ ಸಂಸ್ಥೆ DNEG ಜೊತೆ ಕೈಜೋಡಿಸಲಾಗಿದೆ.