ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15 (KBC 15) ಶೀಘ್ರದಲ್ಲೇ ಇತಿಹಾಸ ಬರೆಯಲು ಸಿದ್ದವಾಗಿದೆ. ಸೆ. 4 ಮತ್ತು 5ರ ಸಂಚಿಕೆಗೆ ಎಲ್ಲರೂ ಕಾಯುತ್ತಿದ್ದಾರೆ. ಇದಕ್ಕೆ ಕಾರಣ ಹಾಟ್‌ಸೀಟ್ ಮೇಲೆ ಕುಳಿತುಕೊಂಡಿರುವ ಪಂಜಾಬ್‌ನ 21 ವರ್ಷದ ಜಸ್ಕರನ್ ಸಿಂಗ್ 7 ಕೋಟಿ ಮೌಲ್ಯದ 16ನೇ ಪ್ರಶ್ನೆಗೆ ಉತ್ತರ ನೀಡಲಿದ್ದಾರಾ? ಎಂಬುವುದು. ಸರಿಯಾದ ಉತ್ತರ ನೀಡಿದರೆ 7 ಕೋಟಿಗೆದ್ದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಜಸ್ಕರನ್ ಶೋನ ಮೊದಲ ಕೋಟ್ಯಾಧಿಪತಿ: ವಿಶೇಷತೆ ಎಂದರೆ ಜಸ್ಕರನ್ ಸಿಂಗ್ 16ನೇ ಪ್ರಶ್ನೆಗೆ ಉತ್ತರ ನೀಡುವ ಮುನ್ನ 1 ಕೋಟಿ ಮೌಲ್ಯದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ 15ನೇ ಸೀಸನ್‌ನಲ್ಲಿ ಒಂದು ಕೋಟಿ ಗೆದ್ದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಈಗ ಅಂತಿಮ ಹಂತದಲ್ಲಿ 7 ಕೋಟಿ ರೂ. ಪ್ರಶ್ನೆಯನ್ನು ಇವರು ಎದುರಿಸಲಿದ್ದಾರೆ. ಅಮಿತಾಬ್ ಬಚ್ಚನ್ ಸ್ಪರ್ಧಿ 1 ಕೋಟಿ ರೂ. ಗೆದ್ದಿದ್ದಾರೆ ಎಂದು ಘೋಷಿಸುವುದರೊಂದಿಗೆ ಸೋನಿ ಎಂಟರ್‌ಟೈನ್‌ಮೆಂಟ್ ಒಂದು ಪ್ರೋಮೋವನ್ನು ಹಂಚಿಕೊಂಡಿತ್ತು. ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, 7 ಕೋಟಿ ರೂ ಪ್ರಶ್ನೆಯನ್ನು ಸ್ಪರ್ಧಿ ಎದುರಿಸುತ್ತಿರುವ ಬಗ್ಗೆ ಬಹಿರಂಗಪಡಿಸಿದೆ.
ಹೊಸ ಪ್ರೋಮೋದಲ್ಲಿ ಏನಿದೆ?: ಸೋನಿ ಎಂಟರ್‌ಟೈನ್‌ಮೆಂಟ್ ಟಿವಿ ಮುಂದಿನ ಸಂಚಿಕೆಯ ಹೊಸ ಪ್ರೋಮೋ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಅಮಿತಾಬ್ ಮೊದಲಿಗೆ ಈವರೆಗೆ ಕೋಟಿ ಗೆದ್ದ ಎಲ್ಲರ ಚಿತ್ರಗಳನ್ನು, ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. 2000ರಲ್ಲಿ ಶೋ ಪ್ರಾರಂಭವಾದಾಗಿನಿಂದ ಹಲವಾರು ಸ್ಪರ್ಧಿಗಳು ಕೋಟ್ಯಧಿಪತಿಗಳಾಗಿದ್ದನ್ನು ಬಿಗ್ ಬಿ ನೆನಪಿಸಿಕೊಳ್ಳುತ್ತಾರೆ. ಆದರೆ 16ನೇ ಪ್ರಶ್ನೆಯಾದ 7 ಕೋಟಿಯನ್ನು ಯಾರೂ ದಾಟಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳುತ್ತಾರೆ. ಈ ಸೀಸನ್‌ನಲ್ಲಿ 16ನೇ ಪ್ರಶ್ನೆಯನ್ನು ಪ್ರಸ್ತುತಪಡಿಸುತ್ತಿದ್ದಂತೆ ಜಸ್ಕರನ್ ಸಿಂಗ್ ನೀರು ಕುಡಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ದೇಶಸೇವೆ ಮಾಡುವ ಕನಸು ಹೊತ್ತ ಸ್ಪರ್ಧಿ: ಪಂಜಾಬ್‌ನ ಖಲ್ರಾದಿಂದ ಬಂದ ಸ್ಪರ್ಧಿ ಜಸ್ಕರನ್ ಸಿಂಗ್ ಕೋಟಿ ಗೆದ್ದು, ಈ ಸೀಸನ್‌ನ ಮೊದಲ ಕೋಟ್ಯಧಿಪತಿಯಾಗಲಿ ಎಂಬುವುದು ಎಲ್ಲರ ಹಾರೈಕೆ. ಜಸ್ಕರನ್ ಅವರು ಐಎಎಸ್ ಆಗಿ ದೇಶ ಸೇವೆ ಮಾಡುವ ಕನಸ್ಸನ್ನು ಹೊತ್ತಿದ್ದಾರೆ. ಇವರ ಊರಲ್ಲಿ ಪದವಿ ಪಡೆದ ಕೆಲವರಲ್ಲಿ ಇವರು ಕೂಡ ಒಬ್ಬರು. ಕೌನ್ ಬನೇಗಾ ಕರೋಡ್‌ಪತಿ ಸಂಚಿಕೆ ಸೆ.4 ಮತ್ತು 5 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಕನಸು ನನಸಾಗಿದೆ: ತಮ್ಮ ಸಾಧನೆಗೆ ಇಡೀ ಜಿಲ್ಲೆ ಹೆಮ್ಮೆ ಪಡುತ್ತಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಲೆಜೆಂಡ್ ಅಮಿತಾಬ್ ಬಚ್ಚನ್ ಅವರನ್ನು ತುಂಬಾ ಹತ್ತಿರದಿಂದ ನೋಡುವುದು ಅವರ ಕನಸು ನನಸಾಗಿದೆಯಂತೆ. ಜಸ್ಕರನ್ ಕಳೆದ 4 ವರ್ಷಗಳಿಂದ ಈ ಕಾರ್ಯಕ್ರಮಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರಂತೆ. ಅಂತಿಮವಾಗಿ ಅವರ ಪ್ರಯತ್ನ ಸಫಲವಾಗಿದೆ.
ಇದನ್ನೂ ಓದಿ: ಶೀಘ್ರದಲ್ಲೇ 'ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15': ಈ ಬಾರಿ ಹೊಸ ಲುಕ್ನಲ್ಲಿ ಬಿಗ್ ಬಿ ನಿಮ್ಮ ಮುಂದೆ..