2023ನೇ ವರ್ಷದಲ್ಲಿ ಕನ್ನಡ ಚಿತ್ರರಂಗದ ಎರಡ್ಮೂರು ಸಿನಿಮಾಗಳಷ್ಟೇ ಹಿಟ್ ಆಗಿವೆ. 200ಕ್ಕೂ ಹೆಚ್ಚು ಚಿತ್ರಗಳು ತೆರೆ ಕಂಡಿದ್ದರೂ ಸಹ ಹಿಟ್ ಪಡೆದುಕೊಂಡಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು. ಈ ವಸಂತಕ್ಕೆ ವಿದಾಯ ಹೇಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಮಧ್ಯೆ ಕನ್ನಡದ ಹೆಚ್ಚಿನ ಸ್ಟಾರ್ ನಟರ ಸಿನಿಮಾಗಳು 2024ಕ್ಕೆ ತೆರೆಗೆ ಅಪ್ಪಳಿಸಲು ಅಣಿಯಾಗುತ್ತಿದೆ. ಇದರ ಜೊತೆಗೆ ಹೊಸಬರ ಸಿನಿಮಾಗಳು ಕೂಡ ಬೆಳ್ಳಿ ತೆರೆ ಮೇಲೆ ಕಮಾಲ್ ಮಾಡುವ ನಿರೀಕ್ಷೆ ಇದೆ.

ಮ್ಯಾಕ್ಸ್: ಮುಂದಿನ ವರ್ಷಕ್ಕೆ ಸಿನಿಮಾ ಚಿತ್ರಣ ಬದಲಾಗಲಿದೆ ಎಂಬ ನಿರೀಕ್ಷೆ ಗಾಂಧಿನಗರದ ಸಿನಿಮಾ ಪಂಡಿತರಲ್ಲಿದೆ. ಈ ಮಾತಿಗೆ ಪೂರಕವಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರ ಬಿಡುಗಡೆ ಆಗಲಿದೆ. 'ವಿಕ್ರಾಂತ್ ರೋಣ' ನಂತರ ಕಿಚ್ಚನ ಯಾವುದೇ ಸಿನಿಮಾಗಳು ಬಂದಿಲ್ಲ. ಇದೀಗ 'ಮ್ಯಾಕ್ಸ್'ಗಾಗಿ ತಮಿಳು ನಿರ್ದೇಶಕರೊಂದಿಗೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಸುದೀಪ್ ಹುಟ್ಟುಹಬ್ಬದಂದು ಚಿತ್ರತಂಡ ಟೈಟಲ್ ಅನ್ನು ಹಂಚಿಕೊಂಡಿತ್ತು. ಇದು ಸಿನಿ ಪ್ರೇಮಿಗಳು 'ಮ್ಯಾಕ್ಸ್'ಗಾಗಿ ಕಾತರದಿಂದ ಕಾಯುವಂತೆ ಮಾಡಿದೆ.

ಮಾರ್ಟಿನ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 2019ರಲ್ಲಿ 'ಪೊಗರು' ಚಿತ್ರ ಮಾಡಿದ್ದು ಬಿಟ್ಟರೆ ಮತ್ಯಾವುದೇ ಸಿನಿಮಾಗಳು ಮಾಡಿಲ್ಲ. ಮುಂದಿನ ವರ್ಷ 'ಮಾರ್ಟಿನ್' ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದೆ. ಈ ಸಿನಿಮಾ ಖಂಡಿತವಾಗಿಯೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡುತ್ತೆ ಅನ್ನೋದು ಸಿನಿ ಪಂಡಿತರ ಬಲವಾದ ನಂಬಿಕೆ.

ಕರಟಕ ಧಮನಕ: ಹ್ಯಾಟ್ರಿಕ್ ಹೀರೋ ಮುಂದಿನ ವರ್ಷವೂ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ವರ್ಷ ಕಾಲಿವುಡ್ ನಟ ರಜನಿಕಾಂತ್ ಮುಖ್ಯಭೂಮಿಕೆಯ 'ಜೈಲರ್' ಸಿನಿಮಾದಲ್ಲಿ ನಟಿಸಿ ಅದ್ಭುತ ಯಶಸ್ಸು ಕಂಡಿದ್ದಾರೆ. 'ಘೋಸ್ಟ್' ಚಿತ್ರಕ್ಕೂ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿದೆ. ಇದೀಗ ಮೊದಲ ಬಾರಿಗೆ ಶಿವಣ್ಣ ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. 'ಕರಟಕ ಧಮನಕ' ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದ್ದು, ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಭೈರತಿ ರಣಗಲ್: 'ಭೈರತಿ ರಣಗಲ್' ಕೂಡ ಶಿವಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರವು ಮುಂದಿನ ವರ್ಷ ತೆರೆ ಕಾಣುವುದು ಕನ್ಫರ್ಮ್ ಆಗಿದೆ. ಭೈರತಿ ಲುಕ್ನಲ್ಲಿ ಶಿವಣ್ಣನ ನೋಡಲು ನಾಲ್ಕೈದು ವರ್ಷಗಳಿಂದ ಕಾಯುತ್ತಿದ್ದ ಶಿವ ಸೈನ್ಯವು, ಚಿತ್ರವನ್ನು ಹೊತ್ತು ಮೆರೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಯುಐ: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. 8 ವರ್ಷಗಳ ನಂತರ ಉಪ್ಪಿ ಡೈರೆಕ್ಟರ್ ಟೋಪಿ ತೊಟ್ಟಿರುವ ಈ ಚಿತ್ರವನ್ನು ಕೆ.ಪಿ ಶ್ರೀಕಾಂತ್ ಮತ್ತು ನವೀನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್ ಆಗಿರುತ್ತೆ ಅನ್ನೋದು ಗೊತ್ತಾಗಿದೆ.

ಉತ್ತರಕಾಂಡ: ಶೂಟಿಂಗ್ ಮುಗಿಸಿರುವ ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ' ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಣ್ಣ ಟೀಸರ್ನಿಂದ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ಕೂಡ ನಟಿಸಿದ್ದಾರೆ. ಹೀಗಾಗಿ ಸಿನಿ ಪ್ರೇಮಿಗಳಲ್ಲಿ ಸಹಜವಾಗಿಯೇ ಚಿತ್ರದ ಮೇಲೆ ಕುತೂಹಲವಿದ್ದು, ಉತ್ತರಕಾಂಡ ಹಿಟ್ ಲಿಸ್ಟ್ ಸೇರಬಹುದು ಎಂಬ ಭವಿಷ್ಯದ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರ್ತಿವೆ.

ಭೀಮ: 'ಸಲಗ' ಸಿನಿಮಾದ ನಂತರ ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ 'ಭೀಮ' ಸಿನಿಮಾ ಕೂಡ 2024ರಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದ್ದು, ಇದು ಮುಗಿದರೆ ಸಿನಿಮಾ ಕಂಪ್ಲೀಟ್ ಆಗುತ್ತದೆ. ಬಹುತಾರಾಗಣವಿರುವ ಈ ಚಿತ್ರದ ಮೇಲೆ ನಿರೀಕ್ಷೆ ಇದೆ.

ಯುವ: ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸಿನಿಮಾ 'ಯುವ'. ಹೊಂಬಾಳೆ ಫಿಲ್ಮ್ ನಿರ್ಮಾಣದ ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದಾರೆ. ಅಪ್ಪು ಅಗಲಿದ ನಂತರ ಯುವ ರಾಜ್ಕುಮಾರ್ ಅವರ ಸ್ಥಾನ ತುಂಬುತ್ತಾರೆ ಎಂಬ ನಿರೀಕ್ಷೆ ಅಭಿಮಾನಿ ವಲಯದಲ್ಲಿದೆ.
ಮುಂದಿನ ವರ್ಷ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಬಿಟ್ಟು ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಬರೋದ್ರಲ್ಲಿ ಸಂಶಯವಿಲ್ಲ. ಇವುಗಳ ಜೊತೆ ರಕ್ಷಿತ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ನೊಂದಿಗೆ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ರಿಚರ್ಡ್ ಆಂಟೋನಿ' ಮತ್ತು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸಿರುವ ಕಾಂತಾರ 2 ಕೂಡ 2024ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಲ್ಲದೇ, ಪೆಪೆ, ವಿಕ್ರಂ ರವಿಚಂದ್ರನ್ ಅಭಿನಯದ ಮುಧೋಳ್ ಚಿತ್ರಗಳು ಕೂಡ ತೆರೆ ಕಾಣಲಿದೆ.

ಇದನ್ನೂ ಓದಿ: 'ಸಲಾರ್' ಬಿಡುಗಡೆಗೆ ಕ್ಷಣಗಣನೆ: ಚಿತ್ರದ ಎರಡನೇ ಹಾಡು 'ಪ್ರತಿಕಥೆಯ..' ನೋಡಿ