ನವದೆಹಲಿ: ಕನ್ನಡದ ಸೂಪರ್ಹಿಟ್ ಸಿನಿಮಾ ಕಾಂತಾರದ "ವರಾಹರೂಪಂ" ಹಾಡಿನ ಮೇಲೆ ಕೃತಿಚೌರ್ಯ ಆರೋಪ ಮಾಡಿದ್ದ ಕೇರಳದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ಗೆ ಸುಪ್ರೀಂಕೋರ್ಟ್ನಲ್ಲೂ ಹಿನ್ನಡೆಯಾಗಿದೆ. ಹಾಡಿನ ಪ್ರಸಾರಕ್ಕೆ ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ತಡೆ ನೀಡಿದೆ. ಅಲ್ಲದೇ, ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಾಂತಾರ ಸಿನಿಮಾದ ವರಾಹರೂಪಂ ಹಾಡು 2015 ರಲ್ಲಿ ಬಿಡುಗಡೆ ಮಾಡಿದ ತಮ್ಮ ಮೂಲ ಸಂಯೋಜನೆಯಾದ 'ನವರಸ'ದ ನಕಲು ಎಂದು ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ಆರೋಪಿಸಿತ್ತು. ಅದನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಲು ತಡೆ ನೀಡಬೇಕು. ಅಲ್ಲದೇ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಕೃತಿಚೌರ್ಯ ಆರೋಪದಡಿ ಬಂಧಿಸಬೇಕು ಎಂದು ಕೋರಿ ಬ್ಯಾಂಡ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇಂದು ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠ ಕೇರಳ ಹೈಕೋರ್ಟ್ ಈ ಸಂಬಂಧ ವಿಧಿಸಿದ್ದ ಷರತ್ತಿಗೆ ತಡೆಯಾಜ್ಞೆ ನೀಡಿತು. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾದ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಿತು.
ವಿಚಾರಣೆಯ ವೇಳೆ ಫೆಬ್ರವರಿ 12 ಮತ್ತು 13 ರಂದು ತನಿಖಾ ಅಧಿಕಾರಿಯ ಮುಂದೆ ಹಾಜರಾಗಬೇಕು. ಈ ವೇಳೆ ಬಂಧಿಸಿದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಷರತ್ತುಗಳಿಗೆ ಒಳಪಟ್ಟು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಇದೇ ವೇಳೆ ಸುಪ್ರೀಂ ಕೋರ್ಟ್ ಪೀಠ ಹೇಳಿತು.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು "ನವರಸಂ"ನ ಸಂಗೀತವನ್ನು ನಿಯಮಬಾಹಿರವಾಗಿ ಬಳಸಿಕೊಂಡಿದ್ದಾರೆ ಎಂದು ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 63 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಏನಿದು ವರಾಹರೂಪಂ ಹಾಡಿನ ವಿವಾದ: ಕರಾವಳಿ ಭಾಗದ ದೈವಾರಾಧನೆಯನ್ನು ಮೂಲವಾಗಿಟ್ಟುಕೊಂಡು ಚಿತ್ರಿಸಲಾದ ಕನ್ನಡದ ಅಪ್ಪಟ ಸಿನಿಮಾ ಕಾಂತಾರದಲ್ಲಿನ "ವರಾಹರೂಪಂ" ಹಾಡು ಕೃತಿಚೌರ್ಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕೇರಳದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ತಾನು 2015 ರಲ್ಲಿ ಬಿಡುಗಡೆ ಮಾಡಿದ 'ನವರಸಂ'ನ ನಕಲಾಗಿದೆ. ವರಾಹರೂಪಂ ಹಾಡು ತಮ್ಮ ಮೂಲ ಸಂಯೋಜಯನ್ನೇ ಹೊಂದಿದೆ ಎಂದು ಬ್ಯಾಂಡ್ ಆರೋಪಿಸಿ ಪ್ರಕರಣ ದಾಖಲಿಸಿತ್ತು.
ಹಾಡನ್ನು ಸಿನಿಮಾ ಸೇರಿದಂತೆ ಅಮೆಜಾನ್ ಪ್ರೈಮ್, ಯೂಟ್ಯೂಬ್ ಸೇರಿದಂತೆ ಎಲ್ಲಿಯೂ ಪ್ರಸಾರ ಮಾಡದಂತೆ ತಡೆ ನೀಡಬೇಕು. ಅನುಮತಿ ರಹಿತವಾಗಿ ಹಾಡಿನ ಸಂಯೋಜನೆಯನ್ನು ಬಳಸಿಕೊಂಡ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ಕೋರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳದ ಹೈಕೋರ್ಟ್ ಹಾಡಿನ ಮೂಲ ಸಂಯೋಜನೆಯನ್ನು ನಕಲು ಮಾಡಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಡ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲೂ ಈಗ ಹಿನ್ನಡೆ ಉಂಟಾಗಿದೆ.
ಓದಿ: ಕೇರಳ ಕೋರ್ಟ್ನಲ್ಲಿ 'ಕಾಂತಾರ'ಕ್ಕೆ ಜಯ: ವರಾಹ ರೂಪಂ ಹಾಡು ಕೇಳಿ ಆನಂದಿಸಿ