'ಕಾಲಾಪತ್ಥರ್' ಈ ಹೆಸರು ಕೇಳಿದಾಕ್ಷಣ ಬಾಲಿವುಡ್ ನೆನಪಾಗುತ್ತದೆ. ಬಿಗ್ ಬಿ ಅಮಿತಾಭ್ ಬಚ್ಚನ್ ನಟಿಸಿದ ಹಿಟ್ ಸಿನಿಮಾಗಳಲ್ಲೊಂದು. ಇದೀಗ ಈ ಹೆಸರಿನ ಮೇಲೆ ಕನ್ನಡದಲ್ಲೂ ಸಿನಿಮಾ ಬರುತ್ತಿದೆ. 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಟಿಸಿರುವ 'ಕಾಲಾಪತ್ಥರ್' ಚಿತ್ರದ ಶೂಟಿಂಗ್ ಆಲ್ಮೋಸ್ಟ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ ಈ ಸಿನಿಮಾದ 'ಗೋರುಕನ ಗಾನ' ಹಾಡನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಟಿ ತಾರಾ ಅನುರಾಧ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
- " class="align-text-top noRightClick twitterSection" data="">
'ಗೋರುಕನ ಗಾನ' ಹಾಡನ್ನು ಖ್ಯಾತ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸರಿಗಮಪ ಖ್ಯಾತಿಯ ಶಿವಾನಿ ಹಾಡಿದ್ದಾರೆ. ಹಾಡು A2 ಮ್ಯೂಸಿಕ್ನಲ್ಲಿ ಬಿಡುಗಡೆಯಾಗಿದ್ದು, ಈವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಚಿತ್ರದ ಬಗ್ಗೆ ಮಾತು ಆರಂಭಿಸಿದ ನಟ ಹಾಗೂ ನಿರ್ದೇಶಕ ವಿಕ್ಕಿ ವರುಣ್, 'ಗೋರುಕನ ಗಾನ' ನಮ್ಮ ಚಿತ್ರದ ಮೊದಲ ಹಾಡು. ಈ ಸಾಂಗ್ ಮೂಲಕ ಮಂಗಳಮುಖಿಯರು ನಮ್ಮ ಚಿತ್ರದ ಕಥೆ ಹೇಳುತ್ತಾರೆ. ಇದು ಚಿತ್ರದ ಕಥೆ ಹೇಳುವ ಗೀತೆಯಾಗಿರುವುದರಿಂದ ಲಿರಿಕಲ್ ಸಾಂಗ್ ಮಾತ್ರ ರಿಲೀಸ್ ಮಾಡಿದ್ದೇವೆ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಶಿವಾನಿ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ" ಎಂದ ಅವರು, ಹಾಡು ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ತಾರಾ ಅವರಿಗೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ: 'ಬರ್ಕಳಿ ಡೇಟು, ಹತ್ತಿ ಕೆಂಪ್ ಬಸ್ಸು': ಟಗರು ಪಲ್ಯ ರಿಲೀಸ್ ಡೇಟ್ ಅನೌನ್ಸ್
ಬಳಿಕ ನಾಯಕ ನಟಿ ಧನ್ಯಾ ರಾಮ್ಕುಮಾರ್ ಮಾತನಾಡಿ, "ಈ ಚಿತ್ರದಲ್ಲಿ ವಿಕ್ಕಿ ವರುಣ್ಗೆ ಜೋಡಿಯಾಗಿದ್ದೇನೆ. ಸಿನಿಮಾದಲ್ಲಿ ಗಂಗಾ ಎಂಬ ಪಾತ್ರ ಮಾಡಿದ್ದೇನೆ" ಎಂದು ತಿಳಿಸಿದರು.
"2.0 ಹೊಸ ವರ್ಷನ್ನಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡು ಇದು. ನಾಗೇಂದ್ರ ಪ್ರಸಾದ್ ಅದ್ಭುತವಾಗಿ ಗೀತರಚನೆ ಮಾಡಿದ್ದಾರೆ. ಹದಿನಾರು ವರ್ಷದ ಶಿವಾನಿ ಅವರ ಗಾಯನ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ" ಎಂದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹೇಳಿದರು.
ನಂತರ ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, "ದೇಸಿ ಶೈಲಿಯಲ್ಲಿ ಸಂಗೀತ ಸಂಯೋಜಿಸುವುದರಲ್ಲಿ ಅನೂಪ್ ಸೀಳಿನ್ ಪ್ರಮುಖರು. 'ಗೋರುಕನ' ಎಂದರೆ 'ಸುವ್ವಿ' ಎಂದರ್ಥ. ಹೆಚ್ಚಾಗಿ ಸೋಲಿಗರು ಈ ಪದವನ್ನು ಬಳಸುತ್ತಾರೆ" ಎಂದು ತಿಳಿಸಿದರು.
ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕರಾದ ಸಿಂಪಲ್ ಸುನಿ, ಮಹೇಶ್ ಕುಮಾರ್ (ಮದಗಜ), ಜಿ.ಟಿ.ಮಾಲ್ನ ಮಾಲೀಕರಾದ ಆನಂದ್, ಉದ್ಯಮಿ ಜಗದೀಶ್ ಚೌಧರಿ ಮುಂತಾದವರು ಸಾಕ್ಷಿಯಾದರು. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಸದ್ಯದಲ್ಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ದೇಶದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಜೀವನಾಧಾರಿತ 'ಸ್ಯಾಮ್ ಬಹದ್ದೂರ್' ಸಿನಿಮಾ ಪೋಸ್ಟರ್ ಬಿಡುಗಡೆ