ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮುಖ್ಯಭೂಮಿಕೆಯ ಜವಾನ್ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎರಡು ವಾರಗಳಲ್ಲಿ ಭಾರತದಲ್ಲಿ 526.78 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶ ಕಂಡಿದೆ. ಅದ್ಭುತ ಅಂಕಿ ಅಂಶದೊಂದಿಗೆ ಗಲ್ಲಾಪೆಟ್ಟಿಗೆ ಸಂಗ್ರಹ ಆರಂಭಿಸಿದ ಸಿನಿಮಾ ಈಗಲೂ ಪ್ರೇಕ್ಷಕರ ಚರ್ಚೆಯ ವಿಷಯವಾಗಿದೆ. ಸಿನಿಮಾ ತೆರೆಕಂಡು 15 ದಿನಗಳನ್ನು ಪೂರ್ಣಗೊಳಿಸಿದ್ದು, 16ನೇ ದಿನ (ಇಂದು) ಕಲೆಕ್ಷನ್ ಕೊಂಚ ಇಳಿಕೆ ಕಾಣಲಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅದಾಗ್ಯೂ, ಕಿಂಗ್ ಖಾನ್ ಶಾರುಖ್ ಅಭಿನಯದ ಜವಾನ್ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಜವಾನ್ ಜಗತ್ತಿನೆಲ್ಲೆಡೆ ಉತ್ತಮ ಪ್ರದರ್ಶನ ಮುಂದುವರಿಸಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಸರಿಸುಮಾರು 900 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅತ್ಯಂತ ಕಡಿಮೆ ದಿನಗಳಲ್ಲಿ 900 ಕೋಟಿ ರೂಪಾಯಿ ವ್ಯವಹಾರ ನಡೆಸಿದ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೂ ಜವಾನ್ ಪಾತ್ರವಾಗಿದೆ.
ಎರಡು ವಾರಗಳ ನಂತರ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಗಳಿಕೆ ಇಳಿಮುಖವಾಗುವ ಸೂಚನೆ ಕೊಟ್ಟಿದೆ. ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, 16ನೇ ದಿನ ಅಂದರೆ ಇಂದು ಚಿತ್ರ 6.09 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಈ ಮೂಲಕ ಜವಾನ್ 16 ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 532.87 ಕೋಟಿ ರೂ. ಮಾಡಿದಂತಾಗುತ್ತದೆ. 15 ದಿನಗಳಲ್ಲಿ ಸಿನಿಮಾ ಭಾರತದಲ್ಲಿ ಒಟ್ಟು 526.78 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.
ಇದನ್ನೂ ಓದಿ: '₹100 ಕೋಟಿ ಸಾಮಾನ್ಯವಾಗ್ಬಿಟ್ಟಿದೆ, ನಮ್ಮ ಗಮನ ₹1,000 ಕೋಟಿ ಮೇಲಿರಲಿ': ಸಲ್ಮಾನ್ ಖಾನ್
ಇದೇ ಮೊದಲ ಬಾರಿಗೆ ದಕ್ಷಿಣದ ಅಟ್ಲೀ ಕುಮಾರ್ ಶಾರುಖ್ ಖಾನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ಸೂಪರ್ ಹಿಟ್ ಆಗಿದೆ. ಶಾರುಖ್ ಗೌರಿ ದಂಪತಿಯ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ದಕ್ಷಿಣ ಚಿತ್ರರಂಗದ ವಿಜಯ್ ಸೇತುಪತಿ, ನಯನತಾರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಲಿವುಡ್ ಪ್ರತಿಭೆ ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ತಲುಪಿದ ರಾಗ್ನೀತಿ: ದೆಹಲಿ ಏರ್ಪೋರ್ಟ್ನಲ್ಲಿ ಲವ್ಬರ್ಡ್ಸ್ ಕಾಣಿಸಿಕೊಂಡಿದ್ದು ಹೀಗೆ- ವಿಡಿಯೋ
ನಾಲ್ಕು ವರ್ಷಗಳ ವಿರಾಮದ ನಂತರ ಬಿಗ್ ಸ್ಕ್ರೀನ್ಗೆ ಮರಳಿರುವ ಎಸ್ಆರ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಪಠಾಣ್ ಚಿತ್ರ ನಿರೀಕ್ಷೆಗೂ ಮೀರಿ ಸಂಪಾದನೆ ಮಾಡುವ ಮೂಲಕ 1,000 ಕೋಟಿ ರೂ.ನ ಕ್ಲಬ್ ಸೇರಿದೆ. ಇತ್ತೀಚಿಗೆ ತೆರೆಕಂಡು ಸದ್ದು ಮಾಡುತ್ತಿರುವ ಜವಾನ್ ಸಾವಿರ ಕೊಟಿ ಸಮೀಪದಲ್ಲಿದೆ. ಮತ್ತೊಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರಾಜ್ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳಿರುವ ಡಂಕಿ ಸಿನಿಮಾ ಈ ವರ್ಷದ ಕೊನೆಗೆ ತೆರಗಪ್ಪಳಿಸಿದೆ. ಎರಡು ಭರ್ಜರಿ ಹಿಟ್ ಕೊಟ್ಟಿರುವ ಶಾರುಖ್ ಖಾನ್ ಅವರ ಮುಂದಿನ ಡಂಕಿ ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.