ಶಿವರಾಜ್ ಕುಮಾರ್ ಅವರ 123ನೇ ಚಿತ್ರ ಬೈರಾಗಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಟೀಸರ್ ಹಾಗೂ ಹಾಡು ಈಗಾಗಲೇ ಜನಪ್ರಿಯತೆ ಗಳಿಸಿದೆ. ಭಜರಂಗಿ 2 ನಂತರ ಶಿವಣ್ಣನ ಅಭಿನಯದ ಬೈರಾಗಿಯ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ.
ಟಗರು ಖ್ಯಾತಿಯ ಡಾಲಿ ಧನಂಜಯ್ ಸಿನಿಮಾದಲ್ಲಿ ಮತ್ತೆ ಶಿವಣ್ಣನಿಗೆ ಜೊತೆಯಾಗಿದ್ದಾರೆ. ಇಬ್ಬರನ್ನೂ ಅಭಿಮಾನಿಗಳು ಮತ್ತೆ ದೊಡ್ಡ ಪರದೆಯಲ್ಲಿ ನೋಡಲು ಕಾತುರರಾಗಿದ್ದಾರೆ. ದಿಯಾ ಸಿನಿಮಾದ ಪೃಥ್ವಿ ಅಂಬರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
"ವೇಷ ಹಾಕ್ದಾಗ ಮಾತ್ರ ಅಲ್ಲ, ನಾವು ಯಾವಾಗಲೂ ಹುಲಿನೇ ಅಂತ ಹೇಳಿ ದೊಡ್ಡೋರು ಬೆಳೆಸಿದ್ರು. ನಾನು ಬೆಳೀತಾ ಬೆಳೀತಾ ಆ ಹುಲಿನೂ ನನ್ನ ಜೊತೆ ಬೆಳೆದುಬಿಡ್ತು" ಎಂಬ ಖಡಕ್ ಡೈಲಾಗ್ ಮೂಲಕ ಟೀಸರ್ ಶುರುವಾಗುತ್ತದೆ. "ಹುಲಿ ಎಂದರೆ ಯಾವಾಗಲೂ ಕೋಪದಲ್ಲೇ ಇರಬೇಕಾ? ಕಾಯೋದು ಮಲಗೋದು ಕೂಡ ಅದರ ಗುಣ ತಾನೇ? ಮಲಗಿರಲಿ" ಎಂಬ ಡೈಲಾಗ್ಗಳು ಟೀಸರ್ನಲ್ಲಿ ಗಮನ ಸೆಳೆಯುತ್ತವೆ.
ಈ ಸಿನಿಮಾದ ವಿಶೇಷತೆಗಳ ಬಗ್ಗೆ ಡಾಲಿ ಧನಂಜಯ್ ಅವರು ಶಿವರಾಜ್ ಕುಮಾರ್ ಹಾಗು ಯುವ ನಟ ಪೃಥ್ವಿ ಅಂಬರ್ ಅವರನ್ನು ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಶಿವರಾಜ್ ಕುಮಾರ್ ತಮ್ಮ ಪಾತ್ರ ಹಾಗೂ ಚಿತ್ರದಲ್ಲಿ ಬರುವ ಪಾತ್ರಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನವಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪು ಎಸ್.ಕುಮಾರ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ನಟ ದೂದ್ ಪೇಡಾ ದಿಗಂತ್ ಕುತ್ತಿಗೆಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ