ವಿಶ್ವ ಶ್ರೇಷ್ಠ ಪ್ರಶಸ್ತಿ ಆಸ್ಕರ್ ಜೊತೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ 'RRR' ತಂಡ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರವಾಗಿದೆ. ಈ ಬಾರಿ ಆಸ್ಕರ್ ತೀರ್ಪುಗಾರರಲ್ಲಿ ಒಟ್ಟು 398 ಹೊಸ ಸದಸ್ಯರಿಗೆ ಸ್ಥಾನ ನೀಡುತ್ತಿರುವುದಾಗಿ ಅಕಾಡೆಮಿ ತಂಡ ಪ್ರಕಟಿಸಿದೆ.
ನಟನಾ ವಿಭಾಗದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಸಂಗೀತ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ನಾಟು ನಾಟು ಬರಹಗಾರ ಚಂದ್ರಬೋಸ್, ಚಿತ್ರ ನಿರ್ಮಾಪಕ ಕರಣ್ ಜೋಹರ್ ಕೂಡ ತಮ್ಮ ಪ್ರತಿಭೆಗಳಿಗನುಸಾರವಾಗಿ ಆಸ್ಕರ್ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.
ಮೋಷನ್ ಪಿಕ್ಚರ್ಸ್ ಆ್ಯಂಡ್ ಆರ್ಟ್ಸ್ ಅಕಾಡೆಮಿಯು 2023ರಲ್ಲಿ ತನ್ನ ಶ್ರೇಣಿಗೆ ಸೇರಲು 398 ಸದಸ್ಯರನ್ನು ಆಶಹ್ವಾನಿಸಿದೆ. ಈ ಪಟ್ಟಿಯಲ್ಲಿ ಆರ್ಆರ್ಆರ್ ಜೋಡಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಸೇರಿದಂತೆ ಹಲವು ಭಾರತೀಯ ಕಲಾವಿದರಿದ್ದಾರೆ. ಭಾರತೀಯ ಆಹ್ವಾನಿತರ ಪೈಕಿ ಕರಣ್ ಜೋಹರ್, ಸಿದ್ಧಾರ್ಥ್ ರಾಯ್ ಕಪೂರ್, ಮಣಿರತ್ನಂ, ಚೈತನ್ಯ ತಮ್ಹಾನೆ, ಶೌನಕ್ ಸೇನ್, ಎಂಎಂ ಕೀರವಾಣಿ ಮತ್ತು ಕೆಕೆ ಸೆಂಥಿಲ್ ಕುಮಾರ್ ಕೂಡ ಸೇರಿದ್ದಾರೆ. ಮನರಂಜನಾ ಉದ್ಯಮದಲ್ಲಿನ ಪ್ರಮುಖ ಸದಸ್ಯರ ಪಟ್ಟಿಯಲ್ಲಿ ಇವರು ಗುರುತಿಸಿಕೊಂಡಿದ್ದಾರೆ.
ಅಕಾಡೆಮಿ ಸಿಇಒ ಬಿಲ್ ಕ್ರಾಮರ್ (Bill Kramer) ಮತ್ತು ಅಕಾಡೆಮಿ ಅಧ್ಯಕ್ಷೆ ಜನೆಟ್ ಯಾಂಗ್ (Janet Yang) ಈ ಬಗ್ಗೆ ತಮ್ಮ ಹೇಳಿಕೆ ನೀಡಿದ್ದು, "ಈ ಕಲಾವಿದರನ್ನು ನಮ್ಮ ಸದಸ್ಯತ್ವಕ್ಕೆ ಸ್ವಾಗತಿಸಲು ಅಕಾಡೆಮಿ ಬಹಳ ಹೆಮ್ಮೆ ಪಡುತ್ತದೆ. ಅವರು ಮನೋರಂಜನಾ ವಿಭಾಗಗಳಾದ್ಯಂತ ಅಸಾಧಾರಣ ಪ್ರತಿಭೆಯನ್ನು ಜಗತ್ತಿನಾದ್ಯಂತ ಪ್ರತಿನಿಧಿಸುತ್ತಾರೆ. ವಿಶ್ವಾದ್ಯಂತ ಸಿನಿಪ್ರಿಯರ ಮೇಲೆ ಮತ್ತು ಚಲನಚಿತ್ರಗಳ ಕಲೆ ಮತ್ತು ವಿಜ್ಞಾನಗಳ ಮೇಲೆ ಪ್ರಮುಖ ಪ್ರಭಾವ ಬೀರಿದ್ದಾರೆ. ಸದಸ್ಯತ್ವದ ಆಯ್ಕೆಯು ನಿರಂತರ ಬದ್ಧತೆಯೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಮೌಳಿ ಸ್ಟೈಲಿಶ್ ಲುಕ್: ಜಕ್ಕಣ್ಣ ಇಲ್ಲದ ಜಾಗವಿಲ್ಲ, ಜಾಹೀರಾತೊಂದರಲ್ಲಿ ಆರ್ಆರ್ಆರ್ ಡೈರೆಕ್ಟರ್ ಮಿಂಚು!
ಅಕಾಡೆಮಿಯು ಪ್ರಸ್ತುತ 10,000 ಸದಸ್ಯರನ್ನು ಹೊಂದಿದೆ. 40 ಪ್ರತಿಶತದಷ್ಟು ಮಹಿಳೆಯರು, 34 ಪ್ರತಿಶತದಷ್ಟು ಕಡಿಮೆ ಪ್ರತಿನಿಧಿಸಲ್ಪುಡುವ ಜನಾಂಗೀಯ ಗುಂಪುಗಳಿಂದ, ಮತ್ತು ಉಳಿದವರು ಯುನೈಟೆಡ್ ಸ್ಟೇಟ್ಸ್‌ನ ಹೊರಗಿನ 50 ದೇಶಗಳು ಮತ್ತು ಪ್ರಾಂತ್ಯಗಳಿಂದ ಬಂದವರಾಗಿದ್ದಾರೆ.
ಇದನ್ನೂ ಓದಿ: Satyaprem Ki Katha: ತೆರೆ ಮೇಲಿನ ಕಾರ್ತಿಕ್ ಕಿಯಾರಾ ಪ್ರೇಮಕಥೆಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ!
ಅಕಾಡೆಮಿಯು ಹಾಲಿವುಡ್ ಚಲನಚಿತ್ರೋದ್ಯಮದ ಅತ್ಯುನ್ನತ ಸಂಸ್ಥೆಯಾಗಿ ಪರಿಗಣಿಸಲ್ಪಟ್ಟಿರುವುದರಿಂದ ವರ್ಷಕ್ಕೆ ಒಂದು ಸುತ್ತಿನ ಆಮಂತ್ರಣಗಳನ್ನು ಮಾತ್ರ ಕಳುಹಿಸುತ್ತದೆ. ಅಕಾಡೆಮಿಯ ಸದಸ್ಯರು ಮಾತ್ರ ನಾಮನಿರ್ದೇಶಿತರಿಗೆ ಮತ ಹಾಕಿ ಗೆಲ್ಲಿಸಬಹುದು. ಆಸ್ಕರ್ ಅಂತಿಮ ವಿಜೇತರನ್ನು ಗುರುತಿಸುವ ಜವಾಬ್ದಾರಿ ಇವರ ಮೇಲಿದೆ. ಮುಂದಿನ ವರ್ಷ ಮಾರ್ಚ್ 10ರಂದು ಆಸ್ಕರ್ ಸಮಾರಂಭ ನಡೆಯಲಿದೆ. ಆಸ್ಕರ್ 2023ರಲ್ಲಿ ಆರ್ಆರ್ಆರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಸದ್ಯ ಸದಸ್ಯತ್ವ ಸ್ಥಾನ ಅಲಂಕರಿಸಿದ್ದಾರೆ.