'ಇಂಡಿಯನ್ 2' ಎಸ್ ಶಂಕರ್ ನಿರ್ದೇಶನದ ಮುಂಬರುವ ತಮಿಳು ಸಿನಿಮಾ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಕಮಲ್ ಹಾಸನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರದ ಅಪ್ಡೇಟ್ ಹೊರಬಿದ್ದಿದೆ. ನವೆಂಬರ್ 3ರಂದು ಸಿನಿಮಾದ ಒಂದು ನೋಟವನ್ನು (ಗ್ಲಿಂಪ್ಸ್) ಚಿತ್ರತಂಡ ಹಂಚಿಕೊಳ್ಳಲಿದೆ ಎಂದು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ತಿಳಿಸಿದೆ. ಈ ವಿಚಾರವನ್ನು ಹಂಚಿಕೊಳ್ಳಲು 'ಇಂಡಿಯನ್ 2'ನ ಹೊಸ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಗೈಂಟ್ ಮೂವೀಸ್ ಮೂಲಕ ಸುಬಾಸ್ಕರನ್ ಅಲ್ಲಿರಾಜ ಮತ್ತು ಉದಯನಿಧಿ ಸ್ಟಾಲಿನ್ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಇಂಡಿಯನ್ 2' ಚಿತ್ರ 1996ರಲ್ಲಿ ಮೂಡಿಬಂದ 'ಇಂಡಿಯನ್'ನ ಮುಂದುವರಿದ ಭಾಗ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಸೇನಾಪತಿ/ಇಂಡಿಯನ್ ಪಾತ್ರವನ್ನು ಮುಂದುವರಿಸಲಿದ್ದಾರೆ. ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಇಂದು ಹೊಸ ಅಪ್ಡೇಟ್ಗಾಗಿ ಹಂಚಿಕೊಂಡಿರುವ ಪೋಸ್ಟರ್ ಬಹಳ ವಿಶೇಷವಾಗಿದೆ.
'ಇಂಡಿಯನ್ 2' ಸಿನಿಮಾ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರ - ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಕನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ ವರ್ಕ್, ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.
ಇದನ್ನೂ ಓದಿ: ಇಂಡಿಯನ್ 2 ಪೋಸ್ಟರ್: ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ ಕಮಲ್ ಹಾಸನ್
ಇಂಡಿಯನ್ ಸಿನಿಮಾದ ಸೀಕ್ವೆಲ್ ಬಗ್ಗೆ 2015ರಲ್ಲಿ ಶಂಕರ್ ಪ್ಲಾನ್ ಹಾಕಿಕೊಂಡರು. 2017ರ ಸೆಪ್ಟೆಂಬರ್ ಕೊನೆಯಲ್ಲಿ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲಾಯಿತು. ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದರು. ಅದಾಗ್ಯೂ, ಹೈ ಬಜೆಟ್ ಹಿನ್ನೆಲೆ ಸಿನಿಮಾ ನಿರ್ಮಾಣ ಹಕ್ಕುಗಳನ್ನು ಲೈಕಾ ಪ್ರೊಡಕ್ಷನ್‌ಗೆ ವರ್ಗಾಯಿಸಲಾಯಿತು. 2019ರ ಜನವರಿಯಲ್ಲಿ ಕೆಲಸಗಳು ಪ್ರಾರಂಭವಾಯಿತು. ಚೆನ್ನೈ, ರಾಜಮಂಡ್ರಿ, ಭೋಪಾಲ್, ಗ್ವಾಲಿಯರ್‌ನಲ್ಲಿ ಶೂಟಿಂಗ್ ನಡೆಸಲಾಯಿತು. ಆದ್ರೆ 2020ರ ಫೆಬ್ರವರಿಯಲ್ಲಿ ಶೂಟಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಸಿನಿಮಾ ಸೆಟ್‌ನಲ್ಲಿ ಅಪಘಾತ ಸಂಭವಿಸಿದ್ದ ಹಿನ್ನೆಲೆ, ಕೆಲಸಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು.
ಕೋವಿಡ್ 19 ಎಫೆಕ್ಟ್, ಹೈ ಬಜೆಟ್, ಕಾನೂನು ವಿವಾದ ಸೇರಿದಂತೆ ವಿವಿಧ ಅಂಶಗಳಿಂದಾಗಿ ಇಂಡಿಯನ್ 2 ಶೂಟಿಂಗ್ ಸ್ಥಗಿತಗೊಳ್ಳುತ್ತಾ ಬಂತು. 2022ರ ಆಗಸ್ಟ್ನಲ್ಲಿ, ರೆಡ್ ಗೈಂಟ್ ಮೂವೀಸ್ ಸಹ-ನಿರ್ಮಾಪಕರಾಗಿ ಚಿತ್ರತಂಡಕ್ಕೆ ಸೇರಿಕೊಂಡರು. ನಂತರ ಚಿತ್ರೀಕರಣ ಪುನಾರಂಭವಾಯಿತು. ತಿರುಪತಿ, ಚೆನ್ನೈ, ಜೋಹಾನ್ಸ್‌ಬರ್ಗ್, ತೈವಾನ್‌ನಲ್ಲಿ ಹೆಚ್ಚಿನ ಚಿತ್ರೀಕರಣ ನಡೆದಿದೆ.
ಇದನ್ನೂ ಓದಿ: 'KH234' ಸಿಕ್ತು ಅಧಿಕೃತ ಚಾಲನೆ: 36 ವರ್ಷಗಳ ಬಳಿಕ ಒಂದಾದ್ರು ಕಮಲ್ ಹಾಸನ್-ಮಣಿರತ್ನಂ