ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಸಂತೋಷದ ವಿಚಾರವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪುಟ್ಟ ಕಂದಮ್ಮನ ಫೋಟೋದ ಜೊತೆಗೆ ಮಗುವಿನ ಹೆಸರು 'ಕೋವಾ ಫೀನಿಕ್ಸ್ ಡೋಲನ್' ಎಂದು ಘೋಷಿಸಿದ್ದರು. ಇದೀಗ ಎರಡನೇ ಬಾರಿ ತಮ್ಮ ಗೆಳೆಯನ ಫೋಟೋವನ್ನು ಸ್ಟೋರಿ ಹಾಕಿಕೊಂಡಿದ್ದಾರೆ. ಆದರೆ, ಅವರ ಹೆಸರನ್ನು ಮಾತ್ರ ಇನ್ನೂ ಬಹಿರಂಗಪಡಿಸದೇ ಮರೆಮಾಚಿದ್ದಾರೆ.
ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ಇಲಿಯಾನಾ ಏಪ್ರಿಲ್ 18 ರಂದು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದ ಮೂಲಕ ತಾಯ್ತನದ ಪ್ರತಿ ಅಪ್ಡೇಟ್ ನೀಡುತ್ತಿದ್ದರು. ಆಗಸ್ಟ್ 1 ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ, ಕಳೆದ ತಿಂಗಳಿನವರೆಗೂ ಮಗುವಿನ ತಂದೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಬಹಿರಂಗವಾಗಿ ಗೆಳೆಯನ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ.
ಈ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಸ್ಟಿಯನ್ ಲ್ಯೂರೆಂಟ್ ಮಿಷೆಲ್ ಜೊತೆಗೆ ಇಲಿಯಾನಾ ಡೇಟಿಂಗ್ ನಡೆಸಿದ್ದರು. ಕತ್ರಿನಾ ಮತ್ತು ವಿಕ್ಕಿ ಕೌಶಲ್ ಹಲವು ಸ್ನೇಹಿತರೊಂದಿಗೆ ಮಾಲ್ಡೀವ್ಸ್ಗೆ ಹಾರಿದಾಗ ಇವರ ಜೊತೆ ಇಲಿಯಾನಾ ಕೂಡ ಪ್ರಯಾಣ ನಡೆಸಿದ್ದರು. ನಂತರ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೂ ಮೊದಲು ನಟಿ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಅವರೊಂದಿಗೆ ಕೆಲ ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು.
ಆದರೆ, ಕಳೆದ ತಿಂಗಳು ಇಲಿಯಾನಾ ಡಿಕ್ರೂಜ್ ತಮ್ಮ ಗೆಳೆಯನ ಫೋಟೋವನ್ನು ಬಹಿರಂಗಪಡಿಸಿದ್ದರು. 'ಡೇಟ್ ನೈಟ್' ಎಂಬ ಶೀರ್ಷಿಕೆಯೊಂದಿಗೆ ಮೊದಲ ಬಾರಿ ತಮ್ಮ ಗೆಳೆಯನ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ಹಾಗಂತ ಇಲಿಯಾನಾ ಅವರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಇದನ್ನು ಕಂಡ ಅಭಿಮಾನಿಗಳು ಗೆಳೆಯನ ನಾಮಾಂಕಿತವನ್ನು ಬಹಿರಂಗಪಡಿಸುವಂತೆ ನಟಿಯಲ್ಲಿ ಕೇಳಿಕೊಂಡಿದ್ದರು. ಇದೀಗ ನಟಿ ಮತ್ತೊಮ್ಮೆ ಗೆಳೆಯನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ, ಹೆಸರನ್ನು ಮತ್ತೊಮ್ಮೆ ಮರೆಮಾಚಿದ್ದಾರೆ.
ಇಲಿಯಾನಾ ಇನ್ಸ್ಟಾ ಸ್ಟೋರಿ: ಇಲಿಯಾನಾ ಗೆಳೆಯ ತಮ್ಮ ಮುದ್ದಿನ ಬೆಕ್ಕನ್ನು ಹಿಡಿದಿಟ್ಟುಕೊಂಡು ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ಈ ಫೋಟೋವನ್ನು ಹಂಚಿಕೊಂಡ ನಟಿ 'ಕಡ್ಲ್ ಬಗ್ಸ್' ಎಂದು ಶೀರ್ಷಿಕೆ ನೀಡಿದ್ದಾರೆ. ಸದಾ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಲ್ಲಿ ಹಿಂದೆ ಸರಿಯುವ ಇಲಿಯಾನಾ ಈ ಬಾರಿಯೂ ತಮ್ಮ ಗೆಳೆಯನ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ ಅಭಿಮಾನಿಗಳು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದ್ದಾರೆ.
ಇವರ ಸಿನಿಮಾ ವಿಚಾರವಾಗಿ ನೋಡುವುದಾದರೆ, ಇಲಿಯಾನಾ ಕೊನೆಯದಾಗಿ ದಿ ಬಿಗ್ ಬುಲ್ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವನ್ನು ನಿರ್ಮಾಪಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ ಮತ್ತು ಅಜಯ್ ದೇವಗನ್ ನಿರ್ಮಿಸಿದ್ದಾರೆ. ಅವರು ಮುಂದೆ ಅನ್ ಫೇರ್ ಅಂಡ್ ಲವ್ಲೀ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ.
ಇದನ್ನೂ ಓದಿ: ಕೊನೆಗೂ ಮಗುವಿನ ತಂದೆಯನ್ನು ಪರಿಚಯಿಸಿದ ಇಲಿಯಾನಾ ಡಿಕ್ರೂಜ್.. ಕತ್ರಿನಾ ಕೈಫ್ ಸಹೋದರನಲ್ಲ, ಮತ್ಯಾರು?