ಬೆಂಗಳೂರು: ಕಿರುತರೆ ನಟಿ ಚೇತನಾ ರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಟ್ ಸರ್ಜರಿ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗೆ ಬೀಗ ಜಡಿದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ. ಸಾವಿನ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆರೋಗ್ಯ ಇಲಾಖೆಯು ಡಾ. ಶೆಟ್ಟಿಗೆ ನೋಟಿಸ್ ಕೊಟ್ಟು ಆಸ್ಪತ್ರೆ ಬಂದ್ ಮಾಡಿಸಿದ್ದಾರೆ.
ಮಗಳ ಶಂಕಾಸ್ಪದ ಸಾವಿನ ಸಂಬಂಧ ಚೇತನಾ ತಂದೆ ವರದರಾಜ್ ನೀಡಿರುವ ದೂರಿನ ಅನ್ವಯ ಸಾವಿನ ರಹಸ್ಯ ಭೇದಿಸಲು ಮುಂದಾಗಿದ್ದ ಸುಬ್ರಹ್ಮಣ್ಯ ನಗರ ಪೊಲೀಸರು, ಆಸ್ಪತ್ರೆಯ ಸಾಹೇಬ್ ಗೌಡ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ. ಈಗ ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
ಚಿನ್ನ ಅಡವಿಟ್ಟಿದ್ದ ಚೇತನಾ: ಫ್ಯಾಟ್ ಸರ್ಜರಿಗೆ ಒಳಗಾಗಿ ಮೃತಪಟ್ಟ ನಟಿ ಚೇತನಾ ರಾಜ್, ತನ್ನ ಮೈ ಮೇಲಿದ್ದ ಚಿನ್ನವನ್ನು ಅಡವಿಟ್ಟು ಫ್ಯಾಟ್ ಸರ್ಜರಿಗೆ ದಾಖಲಾಗಿದ್ದ ಸಂಗತಿ ಬಯಲಾಗಿದೆ. ಚೇತನಾ ಸರ್ಜರಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೇಳಿದರೆ ಹಣ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಮನೆಯವರಿಗೆ ಹೇಳದೇ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟಿದ್ದಳು.
ಟ್ರೈನರ್ ಸಲಹೆ: ಸರ್ಜರಿಗೆ ಒಳಗಾಗಲು ಜಿಮ್ ಟ್ರೈನರ್ ಒಬ್ಬರಿಂದ ಸಲಹೆ ಪಡೆದುಕೊಂಡಿದ್ದಳು ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ. ಈ ಬಗ್ಗೆ ಚೇತನಾ ಸ್ನೇಹಿತರಿಂದ ಮಾಹಿತಿ ಕಲೆ ಹಾಕಿದ್ದಾರೆ. ಟ್ರೈನರ್ ಸಲಹೆಯಂತೆ ಚೇತನಾ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿದ್ದರು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ವರದಿ ಬಂದ ಬಳಿಕ ಕ್ರಮ ಜರುಗಿಸಲಿದ್ದಾರೆ.
ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು: ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವನಟಿ ಚೇತನಾ ರಾಜ್ ಕೆಲ ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಅಬ್ಬಿಗೆರೆಯಲ್ಲಿ ವಾಸವಿರುವ ನಟಿಯ ಪೋಷಕರು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದರು.
ಓದಿ: ರಸ್ತೆ ಬದಿ ಮಲಗಿದ್ದ 14 ಕಾರ್ಮಿಕರ ಮೇಲೆ ಹರಿದ 'ಯಮ ಸ್ವರೂಪಿ' ಲಾರಿ