‘ಕೆಜಿಎಫ್’ 1 ಮತ್ತು ‘ಕೆಜಿಎಫ್2’ ಚಿತ್ರಗಳ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಭಾರತೀಯ ಚಿತ್ರ, ಪ್ರಭಾಸ್ ಅಭಿನಯದ ಸಲಾರ್ನ ಪೋಸ್ಟರ್ 75ನೇ ಸ್ವಾತಂತ್ರ್ಯೋತ್ಸವದ ದಿನ ಬಿಡುಗಡೆಯಾಗಿದೆ. ಇದರ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ.
ಹೊಂಬಾಳೆ ಫಿಲಂಸ್ ನಿರ್ಮಾಪಕ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. 400 ಕೋಟಿ ರೂ.ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರವು ಈಗಾಗಲೇ ಆ್ಯಕ್ಷನ್ ದೃಶ್ಯಗಳಿಂದ ಸುದ್ದಿ ಮಾಡುತ್ತಿದೆ.

‘ಸಲಾರ್’ ಭಾರತ, ಯುರೋಪ್, ಆಫ್ರಿಕಾ ಮುಂತಾದೆಡೆ ಚಿತ್ರೀಕರಣವಾಗುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದಿದೆ. ಚಿತ್ರತಂಡವು ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದು ಗ್ರಾಫಿಕ್ಸ್ ಜವಾಬ್ದಾರಿಯನ್ನು ವಿದೇಶದ ಪ್ರತಿಷ್ಠಿತ ಸ್ಟುಡಿಯೋಗೆ ನೀಡಲಾಗಿದೆ. ಭಾರತದಲ್ಲಿ ಇದುವರೆಗೂ ಯಾವ ಚಿತ್ರದಲ್ಲೂ ನೋಡದಂತಹ ಅತ್ಯುನ್ನತ ವಿಎಫ್ಎಕ್ಸ್ ಕೆಲಸವನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಹೇಳಲಾಗಿದೆ.
ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಪ್ರತಿಭಾವಂತ ಕಲಾವಿದರ ದಂಡು ಸಾಲಾರ್‌ನಲ್ಲಿದೆ.
ಇದನ್ನೂ ಓದಿ : ಸ್ವಾತಂತ್ರ್ಯ ದಿನಕ್ಕೆ ನಿರ್ದೇಶಕ ಮಂಸೋರೆ 19.20.21 ಚಿತ್ರದ ಹೊಸ ಪೋಸ್ಟರ್ ರಿಲೀಸ್