ಬೆಂಗಳೂರು: ಚಲನಚಿತ್ರ ನಿರ್ಮಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಚಾರಿತ್ರ್ಯ ಹರಣ ಆರೋಪದಲ್ಲಿ ನಟಿ ಶೃತಿ ಹರಿಹರನ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಶೃತಿ ಹರಿಹರನ್ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ನಗರದ 8ನೇ ಹೆಚ್ಚುವರಿ ಪ್ರಧಾನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ರದ್ದು ಕೋಡಿ ಪ್ರಶಾಂತ್ ಸಂಬರಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಸಂಬರಗಿ ವಿರುದ್ಧದ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೂ ತಡೆ ನೀಡಿ ವಿಚಾರಣೆ 2023ರ ಫೆಬ್ರವರಿ 1ಕ್ಕೆ ಮುಂದೂಡಿದೆ.
ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ 2018ರ ಅಕ್ಟೋಬರ್ 25ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಅರ್ಜುನ್ ಸರ್ಜಾ ಅವರ ಆಪ್ತರಾಗಿದ್ದ ಸಂಬರಗಿ ಹಾಜರಿದ್ದರು.
ಈ ನಡುವೆ ಸಂಬರಗಿ ವಿರುದ್ಧ ದೂರು ದಾಖಲಿಸಿದ್ದ ಶೃತಿ ಹರಿಹರನ್, ತನ್ನ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ತನ್ನ ಖಾಸಗಿತನ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ, ಸಂಬರಗಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) 509(ಮಹಿಳೆ ಗೌರವಕ್ಕೆ ಧಕ್ಕೆ) ಆರೋಪದಲ್ಲಿ ದೂರು ದಾಖಲಿಸಿದ್ದರು.
ದೂರಿಗೆ ಸಂಬಂಧಿಸಿದಂತೆ ನಗರದ 8ನೇ ಹೆಚ್ಚುವರಿ ಪ್ರಧಾನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ರದ್ದು ಕೋರಿ ಸಂಬರಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: 'ಏನೇ ಆದರೂ ಸಕಾರಾತ್ಮಕವಾಗಿರುತ್ತೇನೆ' : ನಟ ಶಾರುಖ್ ಖಾನ್