ಮುಂಬೈ: ಇಂದು ನಟ ಆರ್ ಮಾಧವನ್ ಅವರ ಹುಟ್ಟುಹಬ್ಬ. ಗುರುವಾರ 53ನೇ ವಸಂತಕ್ಕೆ ಕಾಲಿಟ್ಟ ನಟನಿಗೆ ತಮಿಳು ಚಿತ್ರರಂಗ ಸೇರಿದಂತೆ ಹಲವೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ. ಆರ್ ಮಾಧವನ್ ವೈವಿಧ್ಯಮಯ ಪಾತ್ರಗಳ ಮೂಲಕ ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.
ರೋಮ್ಯಾಂಟಿಕ್ ಪಾತ್ರ ಸೇರಿದಂತೆ ನೀಡಿದ ಎಲ್ಲ ಪಾತ್ರಕ್ಕೆ ನ್ಯಾಯ ಒದಗಿಸುವ ಅವರು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಇವರ ನಟನೆಯ ರಾಕೆಟ್ರಿ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗುವ ಮೂಲಕ ಸಖತ್ ಸದ್ದು ಮಾಡಿತ್ತು. 53ನೇ ವಸಂತಕ್ಕೆ ಕಾಲಿಟ್ಟ ಆರ್ ಮಾಧವನ್ ತಮ್ಮ ಸಿನಿ ಕರಿಯರ್ನಲ್ಲಿ ಹತ್ತು ಹಲವು ಹಿಟ್ ಸಿನಿಮಾಗಳನ್ನು ನೀಡಿದವರು. ಈ ವಿಶೇಷ ದಿನದ ನಿಮಿತ್ತ ಅವರ ನಟನೆಯ 5 ಸಿನಿಮಾಗಳನ್ನೂ ನೆನಪು ಮಾಡಿಕೊಳ್ಳುವುದಾದರೆ...
ಗೌತಮ್ ವಾಸುದೇವ್ ಮೆನನ್ ಬರೆದು ನಿರ್ದೇಶಿಸಿರುವ ಆರ್. ಮಾಧವನ್, ಸೈಫ್ ಅಲಿ ಖಾನ್ ಮತ್ತು ದಿಯಾ ಮಿರ್ಜಾ ನಟಿಸಿರುವ 'ರೆಹನಾ ಹೈ ತೇರ್ರೆ ದಿಲ್ ಮೇ' ಚಿತ್ರ ಅವರ ಸಿನಿ ಪಯಣದ ಬಿಗ್ ಹಿಟ್ಗಳಲ್ಲಿ ಒಂದು. ಚಿತ್ರದಲ್ಲಿನ ಆರ್. ಮಾಧವನ್ ಅವರ ಮ್ಯಾಡಿ ಪಾತ್ರ ಯುವ ಪ್ರೇಕ್ಷಕರಿಗೆ ತುಂಬಾ ಹತ್ತಿರವೆನಿಸಿತು. ಬಾಲಿವುಡ್ನ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಮತ್ತೊಂದು ಸಿನೆಮಾ 'ತನು ವೆಡ್ಸ್ ಮನು' ಕೂಡ ಅವರಿಗೆ ಹೆಸರು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಅನಿವಾಸಿ ಭಾರತೀಯ ವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ತ್ರಿಕೋನ ಪ್ರೇಮಕಥೆ ಇದಾಗಿದ್ದು, ಅವರಿಗೆ ಕಂಗನಾ ರಣಾವತ್ ಜೊಡಿಯಾಗಿ ನಟಿಸಿದ್ದಾರೆ.
ಅದಕ್ಕೂ ಮುನ್ನ ತೆರೆಕಂಡ ರಾಜ್‌ಕುಮಾರ್ ಹಿರಾನಿ ಬರೆದು ನಿರ್ದೇಶಿಸಿರುವ '3 ಈಡಿಯಟ್ಸ್' ಚಿತ್ರ ಕೂಡ ದೊಡ್ಡ ಹಿಟ್ ಕೊಟ್ಟಿತು. ಚೇತನ್ ಭಗತ್ ಅವರ ಕಾದಂಬರಿಯಿಂದ ಹೊರ ಬಂದ ಚಿತ್ರ ಇದಾಗಿದೆ. ರಾಂಚೋ ಆಗಿ ಅಮೀರ್ ಖಾನ್, ರಾಜು ಆಗಿ ಶರ್ಮನ್ ಜೋಶಿ ಫರ್ಹಾನ್ ಖುರೇಷಿ ಆಗಿ ಮಾಧವನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ನ ಬ್ಲಾಕ್‌ಬಸ್ಟರ್ ಚಿತ್ರ ಇದಾಗಿದ್ದು, ಹಣ ಗಳಿಕೆಯಲ್ಲಿ ದಾಖಲೆ ಬರೆಯಿತು. ಈ ಚಿತ್ರದಲ್ಲಿ ಮಾಧವನ್ ಪ್ರತಿಭಾವಂತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಈ ಚಿತ್ರ ಹೇಳುತ್ತದೆ.
ಸಾಲಾ ಖಾಡೂಸ್ ಕೂಡ ಅವರಿಗೆ ಹೆಸರು ತಂದು ಕೊಟ್ಟ ಮತ್ತೊಂದು ಬಾಲಿವುಡ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಮಾಧವನ್ ಮಹಿಳಾ ಬಾಕ್ಸರ್‌ಗೆ ತರಬೇತಿ ನೀಡುವ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ರಂಗ್ ದೇ ಬಸಂತಿ, ಗುರು, ದೆಹಲಿ ಹೈಟ್ಸ್, ಹಲ್ಲಾ ಬೋಲ್, ಮುಂಬೈ ಮೇರಿ ಜಾನ್, ಸಿಕಂದರ್, ತೀನ್ ಪಟ್ಟಿ, ಜೂಥಾ ಹಿ ಸಾಹಿ, ಜೋಡಿ ಬ್ರೇಕರ್ಸ್ ಸೇರಿದಂತೆ ಹತ್ತು ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿ ಸೈ ಅನ್ನಿಸಿಕೊಂಡಿದ್ದಾರೆ. ತಮಿಳು ನಟರಾದರೂ ಹಲವು ಹಿಂದಿ ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಟನೆ ಮಾತ್ರವಲ್ಲದೇ ಚಿತ್ರದ ನಿರ್ದೇಶಕ ಮತ್ತು ಸಹ ಬರಹಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕ್ಲಾಸ್ ಹಾಗೂ ಮಾಸ್ ಎರಡೂ ಪಾತ್ರಗಳಿಗೆ ಜೀವ ತುಂಬುವ ಮಾಧವನ್ ಇದೀಗ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. 2020ರಲ್ಲಿ ತೆರೆ ಕಂಡ ಅಲೈಪಾಯುತೇ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರೆ, ಅದಕ್ಕೂ ಮುನ್ನ 1998ರಲ್ಲಿ ತೆರೆಕಂಡ ‘ಶಾಂತಿ ಶಾಂತಿ ಶಾಂತಿ’ ಚಿತ್ರದ ಮೂಲಕ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ನರಕ ಎಂಬ ಇಂಗ್ಲಿಷ್ ಚಿತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡ ಅವರು, ಮಳಯಾಳಂ ಮತ್ತು ತೆಲುಗು ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಂಬಿ ನಾರಾಯಣನ್ ಅವರ ಜೀನನಾಧಾರಿತ ಕಥೆ ರಾಕೆಟ್ರಿ ಕೂಡ ತೆರೆ ಕಂಡಿತು. ಚಿತ್ರದ ಅಭಿನಯಕ್ಕಾಗಿ ಅವರಿಗೆ IIFA 2023ರಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು.
ಇದನ್ನೂ ಓದಿ: 'ಲವ್ ಜಿಹಾದ್ನಲ್ಲಿ ಸಿಲುಕಿದ್ದೇನೆ, ನನ್ನನ್ನು ರಕ್ಷಿಸಿ': ಪಿಎಂ ಮೋದಿಗೆ ಮನವಿ ಮಾಡಿದ ಮಾಡೆಲ್