ಮಹಿಳೆಯರು ನಿತ್ಯ ಧರಿಸುವ ಸೀರೆ, ಓಲೆ, ಬಳೆ ಹಾಗು ಗೆಜ್ಜೆ ಸೇರಿದಂತೆ ಹಲವು ವಸ್ತುಗಳ ಬಗ್ಗೆ ಸಾಕಷ್ಟು ಹಾಡುಗಳು ಬಂದಿವೆ. ಆದರೆ, ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು, ಸಿನಿಮಾ ಮೂಡಿಬಂದಿಲ್ಲ. ಇದೀಗ ರವಿಕೆ ಕುರಿತಾಗಿಯೇ ಸಿನಿಮಾ ನಿರ್ಮಾಣವಾಗುತ್ತಿದ್ದು ಅದರ ಹೆಸರು 'ರವಿಕೆ ಪ್ರಸಂಗ'. ಹೆಣ್ಣು ಮಕ್ಕಳು ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಢಿ. ಅದೇ ರವಿಕೆಯ ಕುರಿತಾದ ಚಿತ್ರವೇ 'ರವಿಕೆ ಪ್ರಸಂಗ'. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾಗೆ ಸಂಗೀತ ನಿರ್ದೇಶಕ ಗುರುಕಿರಣ್ ಸಾಥ್ ಸಿಕ್ಕಿದೆ.
ಈ 'ರವಿಕೆ ಪ್ರಸಂಗ' ಸಿನಿಮಾದಲ್ಲಿ ಮನಸಲಿ ಜೋರು ಕಲರವ ಎಂಬ ಅದ್ಭುತವಾದ ಮೆಲೋಡಿ ಹಾಡು ಇದೆ. ಈ ಸಾಂಗ್ ಅನ್ನು ಎವರ್ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಅತ್ಯುತ್ತಮ ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎಲ್ಲ ಅಂಶಗಳನ್ನು ಈ ಹಾಡು ಹೊಂದಿದೆ.
ಈ ಅದ್ಭುತ ಸಾಂಗ್ಗೆ ಕಿರಣ್ ಕಾವೇರಪ್ಪ ಅವರ ಅದ್ಭುತ ಸಾಹಿತ್ಯ, ಮಾನಸ ಹೊಳ್ಳ ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ. ಈ ಮೆಲೋಡಿ ಹಾಡುಗಳು ಎಂದಿಗೂ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿರುತ್ತದೆ. ಎಲ್ಲ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳು ಕೇಳುಗರನ್ನು ರಂಜಿಸುತ್ತದೆ.
ಕಿರುತೆರೆ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಈ ಚಿತ್ರದ ಮೂಲಕ ಹೀರೋಯಿನ್ ಆಗಿ ಹೊರಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ಗೀತಾ ಭಾರತಿ ಭಟ್ ಜೊತೆಗೆ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುನನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರತಂಡ: ಈ ಸಿನಿಮಾಗೆ ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪಾವನ ಸಂತೋಷ್ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನ ಚಿತ್ರಕ್ಕಿದೆ. ದೃಷ್ಟಿ ಮಿಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರದ ಎಲ್ಲ ಕೆಲಸಗಳು ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿರುವ ರವಿ ಪ್ರಸಂಗ ಚಿತ್ರ ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: 'ರವಿಕೆ ಪ್ರಸಂಗ'ದ ಟೈಟಲ್ ಸಾಂಗ್ ಬಿಡುಗಡೆ