ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ 'ಕೊರಗಜ್ಜ'. ಬಾಲಿವುಡ್ ನಟ ಕಬೀರ್ ಬೇಡಿ, ನಟಿ ಭವ್ಯ ಹಾಗೂ ಹಾಲಿವುಡ್ ನಟ ಸಂದೀಪ್ ಸೊಪರ್ಕರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಇದೀಗ ಹಾಲಿವುಡ್ ತಂತ್ರಜ್ಞರಿಂದ ಗ್ರಾಫಿಕ್ಸ್ ಟಚ್ ಕೊಡಲಾಗಿದೆ. ಚಿತ್ರೀಕರಣ ಮುಗಿಸಿ ಎಡಿಟಿಂಗ್ ನಡೆಸುತ್ತಿದ್ದ ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಚಿತ್ರಕ್ಕೆ ಮೂರನೆಯ ಬಾರಿಗೆ ಕ್ಲೈಮ್ಯಾಕ್ಸ್ ಚಿತ್ರಿಸಿಕೊಳ್ಳಲಾಗಿದೆ.
ಗಗನ ಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕುವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಮರುಚಿತ್ರಿಸಲಾಗಿದೆ. ಈ ಸಮಯದಲ್ಲಿ ಆಂಟ್ ಮ್ಯಾನ್, ಟ್ರೂ ಸ್ಪಿರಿಟ್, ಅಕ್ಚ ಮ್ಯಾನ್ ಮೊದಲಾದ ಹಾಲಿವುಡ್ ಚಿತ್ರಗಳ VFX ಮತ್ತು ಗ್ರಾಫಿಕ್ಸ್ ತಂತ್ರಜ್ಞರು ಭಾಗಿಯಾಗಿದ್ದರು. ನಂತರ ಯಲಹಂಕದ ಬಳಿ ಇರುವ ಸ್ಟುಡಿಯೋ 9ರಲ್ಲಿ ಸತತ ಐದು ದಿನಗಳ ಕಾಲ ನಡೆದ ಗ್ರೀನ್ ಮ್ಯಾಟ್ ಶೂಟಿಂಗ್ನಲ್ಲಿ ನಟಿ ಶ್ರುತಿ, ನಾಯಕ ನಟ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡ್ಸಿ ಪಾಲ್ಗೊಂಡಿದ್ದರು.
ನಟಿ ಶ್ರುತಿ ಅವರು ನಿರ್ವಹಿಸುತ್ತಿರುವ ಕೊರಗಜ್ಜನ ಸಾಕು ತಾಯಿ ಬೈರಕ್ಕೆ ಬೈಕಾಡ್ತಿಯ ದೈವಸ್ಥಾನ ಉಡುಪಿ ಬಳಿ ಇದ್ದು, ಕೊರಗಜ್ಜ ಮತ್ತು ಸಾಕು ತಾಯಿ ಬೈಕಾಡ್ತಿಯ ಸಂಬಂಧದ ಕುತೂಹಲಕಾರಿ ಅಂಶ ಕ್ಲೈಮ್ಯಾಕ್ಸ್ನಲ್ಲಿ ಮೂಡಿ ಬರಲಿದೆ. ಸಿನಿಮಾದಲ್ಲಿ ಕಬೀರ್ ಬೇಡಿ, ಭವ್ಯ, ಸಂದೀಪ್ ಸೊಪರ್ಕರ್, ಶ್ರುತಿ, ಭರತ್ ಸೂರ್ಯ, ನವೀನ್ ಪಡೀಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ಬಿರಾದರ್ ಅಭಿನಯದ 500ನೇ ಚಿತ್ರದ ಟ್ರೈಲರ್ ರಿಲೀಸ್.. ಬಿಡುಗಡೆ ದಿನಾಂಕವೂ ಘೋಷಣೆ
ಕೇರಳದ ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಲ ಬದಿಯಲ್ಲಿ ಉದ್ಯಾವರ ಅರಸರ ಸಾನಿಧ್ಯ ಇರುವ ಬಹಳ ದೊಡ್ಡ ದೈವಸ್ಥಾನವಿದೆ. 'ಕೊರಗಜ್ಜ' ಸಿನಿಮಾದಲ್ಲಿ ಹಿರಿಯ ನಟಿ ಭವ್ಯ ಅವರು ಉದ್ಯಾವರ ಅರಸರನ್ನು ಎದುರು ಹಾಕಿಕೊಳ್ಳುವ 'ಪಂಜಂದಾಯಿ' ಎನ್ನುವ (ಈಗ ದೈವವೆಂದು ಪೂಜೆಗೊಳಪಟ್ಟಿರುವ) ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದು, ಇದು ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದೆ.
ಇನ್ನೂ ಈ ಸಿನಿಮಾಗೆ ಕಬೀರ್ ಬೇಡಿ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ದಾರೆ. ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದ ಅದರಲ್ಲೂ ಕನ್ನಡ - ತುಳು - ಮಲಯಾಳಂ ಭಾಷೆಗಳ ಸೊಗಡನ್ನು ಅರಿತು, ಅದರ ಏರಿಳಿತ ಮತ್ತು ಭಾವನೆಗಳನ್ನು ಪಾತ್ರಕ್ಕೆ ಅಳವಡಿಸಿಕೊಂಡು, ಗ್ರಾಮ್ಯ ಮತ್ತು ಸ್ವಾಭಾವಿಕ ಶೈಲಿಯಲ್ಲಿ ಧ್ವನಿಯನ್ನು ಏರಿಳಿತಗೊಳಿಸುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ. ಆದರೂ ನಟ ಛಲ ಬಿಡದೇ ಚಿತ್ರದ ವರ್ಜಿನಲ್ ಭಾಷೆಯಲ್ಲೇ ಡಬ್ಬಿಂಗ್ ಮಾಡಿದ್ದಾರೆ.
ಬಹುಕೋಟಿ ರೂಪಾಯಿಗಳನ್ನು ಹೂಡಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯರವರು ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಕನ್ನಡ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸುರೇಶ್ ಅರಸ್ ಮತ್ತು ವಿದ್ಯಾಧರ್ ಶೆಟ್ಟಿ ಸಂಕಲನ, ಸುಧೀರ್ ಕೃಷ್ಣ ಸಂಗೀತ, ಪವನ್ ಕುಮಾರ್ ಡಿಓಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಗ್ರಾಫಿಕ್ಸ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ಕೊರಗಜ್ಜ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ: Adipurush box office collection: ವಿವಾದದ ಮಧ್ಯೆ ಮೂರೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ 'ಆದಿಪುರುಷ್'