ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಸಿನಿಮಾಗಳಿಗೇನು ಬರವಿಲ್ಲ. ಸಾಕಷ್ಟು ಚಿತ್ರಗಳು ಅಭಿಮಾನಿಗಳನ್ನು ರಂಜಿಸುತ್ತವೆ. ಇದೀಗ ಮತ್ತೊಂದು ವಿನೂತನ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ 'ಕೆರೆಬೇಟೆ' ಎಂದು ಶೀರ್ಷಿಕೆ ಇಡಲಾಗಿದೆ. ಕೆರೆಬೇಟೆ ಗೌರಿ ಶಂಕರ್ SRG ನಾಯಕನಾಗಿ ನಟಿಸಿರುವ ಸಿನಿಮಾವಿದು. ಈ ಚಿತ್ರಕ್ಕೆ ರಾಜ್ ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ.
'ಜೋಕಾಲಿ', 'ರಾಜಹಂಸ' ಸಿನಿಮಾಗಳು ಕನ್ನಡ ಸಿನಿ ಪ್ರಿಯರಿಗೆ ನೆನಪಿರಬಹುದು. ಬಹುಶಃ ಈ ಚಿತ್ರದ ಹೆಸರನ್ನು ಮರೆತಿದ್ದರೂ 'ಚುಚ್ಚಿ ಚುಚ್ಚಿ ಕೊಂದೆಯಲ್ಲೇ..' ಎಂಬ ಹಾಡನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಇದೇ ಹಾಡಿನಲ್ಲಿ ಗೌರಿ ಶಂಕರ್ ನಾಯಕನಾಗಿ ಮಿಂಚಿದ್ದರು. 'ರಾಜಹಂಸ' ಸಿನಿಮಾ ರಿಲೀಸ್ ಆಗಿ ಈಗಾಗಲೇ 5 ವರ್ಷಗಳ ಮೇಲಾಗಿದೆ. ಇದೀಗ ಗೌರಿ ಶಂಕರ್ 'ಕೆರೆಬೇಟೆ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
'ಕೆರೆಬೇಟೆ' ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇದು ಅವರ ಚೊಚ್ಚಲ ಚಿತ್ರ. ಕಳೆದ ಹತ್ತು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ರಾಜ್ ಗುರು, ಎ.ಆರ್ ಬಾಬು, ಪವನ್ ಒಡೆಯರ್ ಹಾಗೂ ಇತರ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ 'ಕೆರೆಬೇಟೆ' ಎನ್ನುವ ವಿಭಿನ್ನ ಕಥೆಯ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟು ಸಿನಿ ಪ್ರಿಯರ ಮುಂದೆ ಬರಲಿದ್ದಾರೆ.
ಇದನ್ನೂ ಓದಿ: ಪುತ್ರನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿರುವ ಆರ್ಮುಗ ರವಿಶಂಕರ್
'ಕೆರೆಬೇಟೆ' ಅಂದ್ರೇನು?.. 'ಕೆರೆಬೇಟೆ' ಎಂದರೆ ಮಲೆನಾಡ ಭಾಗದದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡ ಭಾಗದಲ್ಲಿ ವರ್ಷಕೊಮ್ಮೆ ಕೆರೆಬೇಟೆಯಾಡುತ್ತಾರೆ. ಇದು ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಮಲೆನಾಡ ಭಾಗದ ಕೆರೆಬೇಟೆಯನ್ನು ಸಿನಿಮಾ ಮೂಲಕ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕ ರಾಜ್ ಗುರು ಮತ್ತು ನಾಯಕ ಗೌರಿ ಶಂಕರ್. ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕೆರೆಬೇಟೆ ಜನಮನ ಸಿನಿಮಾ ಸಂಸ್ಥೆಯ ಹೆಮ್ಮೆಯ ಕಾಣಿಕೆ. ಇದುವರೆಗೂ ನೋಡಿರದ ಒಂದು ಹಳ್ಳಿ ಸೊಗಡಿನ ಕಥೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಇದೇ 27ರಂದು ಶುಕ್ರವಾರ ಮಧ್ಯಾಹ್ನ 12.01ಕ್ಕೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ ಎಂದು ನಾಯಕ ಗೌರಿ ಶಂಕರ್ ತಿಳಿಸಿದ್ದಾರೆ.
ಚಿತ್ರತಂಡ: 'ಕೆರೆಬೇಟೆ' ಚಿತ್ರವನ್ನು ಜೈ ಶಂಕರ್ ಪಟೇಲ್ ಹಾಗೂ ನಾಯಕ ಗೌರಿ ಶಂಕರ್ ತಮ್ಮ ಜನಮನ ಸಿನಿಮಾ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ನಡುವೆ ಚಿತ್ರತಂಡ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಲಿದೆ. ಚಿತ್ರೀಕರಣವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರ ಹಾಗೂ ಸೊರಬ ಸುತ್ತಮುತ್ತ ಮಾಡಲಾಗಿದೆ. ಕೆರೆಬೇಟೆ ಮುಂದಿನ ವರ್ಷಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: 'ರಾಜಹಂಸ' ಗೌರಿ ಶಂಕರ್ ಮುಂದಿನ ಸಿನಿಮಾದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ ನಾಳೆ ಬಿಡುಗಡೆ