ಮೊದಲು ಕಿರುತೆರೆಯಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಬಳಿಕ ಹೀರೋ ಆಗಿ ಬೆಳ್ಳಿ ತೆರೆ ಮೇಲೆ ಮಿಂಚಿದ ನಟ ಗಣೇಶ್. ಚೆಲ್ಲಾಟ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗಣೇಶ್, ಮುಂಗಾರು ಮಳೆ ಮುಂತಾದ ಸೂಪರ್ ಹಿಟ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಆದರು. ಸದ್ಯ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಅಭಿಮಾನಿ ಬಳಗ ಹೊಂದಿರುವ ಗೋಲ್ಡನ್ ಸ್ಟಾರ್ಗೆ, ಜುಲೈ 2 ರಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ಬಾರಿ ಗಣೇಶ್ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಜನ್ಮದಿನ ಆಚರಿಸಲು ಬೇರೆ ಬೇರೆ ಊರು, ಹಳ್ಳಿಗಳಿಂದ ರಾಜರಾಜೇಶ್ವರಿ ನಗರದಲ್ಲಿರೋ ಗಣೇಶ್ ನಿವಾಸಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.
'ಅಕ್ಕರೆಯ ಅಭಿಮಾನಿ ಬಂಧುಗಳೆ.., ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯತನಕ, ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತೀ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಋಣಿ. ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮೆಲ್ಲರ ಪ್ರೀತಿಯನ್ನು ಅಸ್ವಾದಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ, ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು ಅಂದರೆ ಜುಲೈ 2 ರಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರಲ್ಲಿ ಕ್ಷಮೆ ಕೋರುತ್ತೇನೆ.
ನೀವೆಲ್ಲರೂ ಅಭಿಮಾನದಿಂದ ಪ್ರತೀ ಬಾರಿ ನನಗಾಗಿ ತರುವ ಹಾರ, ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ, ನಿಮ್ಮ ಊರಿನಲ್ಲಿರುವ ಅನಾಥ ಆಶ್ರಮಗಳು, ವೃದ್ಧಾಶ್ರಮಗಳಿಗೆ ಹೋಗಿ, ನಿಮ್ಮ ಕೈಲಾದಷ್ಟು ನೆರವು ಹಾಗು ಸಹಾಯ ಮಾಡಿ. ಆ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿ' ಅಂತಾ ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಸದ್ಯ ಗಾಳಿಪಟ 2 ಸಿನಿಮಾದ ಬಿಡುಗಡೆಗೆ ಕಾಯುತ್ತಿರುವ ಗೋಲ್ಡನ್ ಸ್ಟಾರ್, ಈ ಸಿನಿಮಾವನ್ನು ತಮ್ಮ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಿದ್ದಾರೆ.
ಓದಿ : ಕಿಚ್ಚನನ್ನು ನೋಡಬೇಕಂತೆ ಆ್ಯಸಿಡ್ ದಾಳಿ ಸಂತ್ರಸ್ತೆ.. ಸ್ಪಂದಿಸುತ್ತಾರಾ ಸುದೀಪ್?