ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಮುಂಬರುವ ಬಹುನಿರೀಕ್ಷಿತ 'ಘೂಮರ್'ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಕ್ರೀಡಾಧಾರಿತ ಚಿತ್ರದಲ್ಲಿ ಜೂನಿಯರ್ ಬಚ್ಚನ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಚಿತ್ರದ ಬಿಡುಗಡೆ ದಿನಾಂಕದ ಜೊತೆಗೆ ಅಭಿಷೇಕ್ ಬಚ್ಚನ್ ಮತ್ತು ನಟಿ ಸಯಾಮಿ ಖೇರ್ ಅವರ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಟ್ರೇಲರ್ಗೂ ಮುಹೂರ್ತ ಫಿಕ್ಸ್ ಆಗಿದೆ. 'ಘೂಮರ್' ಸಿನಿಮಾವನ್ನು ಆರ್ ಬಾಲ್ಕಿ ನಿರ್ದೇಶಿಸಿದ್ದಾರೆ.
'ಘೂಮರ್' ಚಿತ್ರದ ಮೋಷನ್ ಪೋಸ್ಟರ್ನಲ್ಲಿ, ಅಭಿಷೇಕ್ ಬಚ್ಚನ್ ಕೋಚ್ ಲುಕ್ ಸಾಕಷ್ಟು ಪವರ್ ಫುಲ್ ಆಗಿ ಕಾಣಿಸುತ್ತಿದೆ. ನಟಿ ಸೈಯಾಮಿ ಅವರು ಅಭಿಷೇಕ್ ಪಕ್ಕದಲ್ಲಿ ನಿಂತಿದ್ದು, ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿಯ ಕ್ರೀಡಾ ಸಮವಸ್ತ್ರ ಧರಿಸಿ ಎಡಗೈಯಲ್ಲಿ ಕ್ರಿಕೆಟ್ ಚೆಂಡನ್ನು ಹಿಡಿದುಕೊಂಡು ನಿಂತಿದ್ದಾರೆ. ಸಯಾಮಿ ಪಾತ್ರದ ಪ್ರಕಾರ, ಅವರಿಗೆ ಬಲಗೈ ಇರುವುದಿಲ್ಲ. ಒಂದೇ ಕೈಯಲ್ಲಿ ಕ್ರಿಕೆಟ್ ಆಡಲು ಅಭ್ಯಸಿಸುವಾಗ ಅವರಿಗೆ ಅಭಿಷೇಕ್ ಬಚ್ಚನ್ ಯಾವ ರೀತಿ ನೆರವಾಗುತ್ತಾರೆ ಎಂಬುದೇ ಕಥಾಹಂದರ.
ಅಭಿಷೇಕ್ ಬಚ್ಚನ್ ಮೋಷನ್ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಲೆಫ್ಟಿ ಹೈ, ಲೆಫ್ಟ್ ಹಿ ಹೈ, ಘೂಮರ್, ಆಗಸ್ಟ್ 18 ರಂದು ಥಿಯೇಟರ್‌ಗಳಿಗೆ ಬರುತ್ತಿದೆ' ಎಂದು ಬರೆದಿದ್ದಾರೆ. ಸದ್ಯ ಘೂಮರ್ ಚಿತ್ರದ ಅಭಿಷೇಕ್ ಬಚ್ಚನ್ ಮತ್ತು ನಟಿ ಸಯಾಮಿ ಖೇರ್ ಅವರ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಇಂಟರ್ನ್ನೆಟ್ನಲ್ಲಿ ಟ್ರೆಂಡಿಂಗ್ ಆಗಿದೆ. 'ಘೂಮರ್' ಟ್ರೇಲರ್ ಇನ್ನೇನು ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅಪ್ಪು ಹಾಗೂ ಪಾರ್ವತಮ್ಮ ಅವರನ್ನು ಫಾಲೋ ಮಾಡ್ತಿದ್ದೀನಿ: ಅಶ್ವಿನಿ ಪುನೀತ್ ರಾಜ್ಕುಮಾರ್
ಆರ್ ಬಾಲ್ಕಿ ನಿರ್ದೇಶಿಸಿ, ಬರೆದಿರುವ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಸಯಾಮಿ ಖೇರ್ ಮಾತ್ರವಲ್ಲದೇ ಶಬಾನಾ ಅಜ್ಮಿ ಮತ್ತು ಅಂಗದ್ ಬೇಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಘೂಮರ್ ಚಿತ್ರವು ಯುವ ಬ್ಯಾಟಿಂಗ್ ಪ್ರಾಡಿಜಿ ಅನಿನಾ ಸುತ್ತ ಸುತ್ತುತ್ತದೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ವೇಳೆ ಸಂಭವಿಸಿದ ದುರಂತ ಅಪಘಾತದಲ್ಲಿ ಆಕೆ ತನ್ನ ಬಲಗೈಯನ್ನು ಕಳೆದುಕೊಳ್ಳುತ್ತಾಳೆ. ಅನಿನಾ ಕನಸುಗಳು ಭಗ್ನಗೊಳ್ಳುತ್ತವೆ.
ಕನಸು ವಿಫಲವಾಗಿ ಹತಾಶೆಗೊಂಡಿದ್ದ ಕ್ರಿಕೆಟಿಗ ಅನಿನಾಳ ಜೀವನದಲ್ಲಿ ಒಂದು ವ್ಯಕ್ತಿಯ ಆಗಮನವಾಗುತ್ತದೆ. ಅವರ ಹೊಸ ಕನಸಿಗೆ ವೇಗ ವೇಗವರ್ಧಕನಾಗುತ್ತಾರೆ. ತರಬೇತಿಯ ಮೂಲಕ ಮತ್ತೆ ಬೌಲರ್ ಆಗಿ ಕ್ರಿಕೆಟ್ ತಂಡಕ್ಕೆ ಮರಳಲು ದಾರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಎದುರಾಳಿಯನ್ನು ಸೋಲಿಸಲು ಘೂಮರ್ ಎಂಬ ಶೈಲಿಯ ಬೌಲಿಂಗ್ ಅನ್ನು ಪ್ರದರ್ಶಿಸಿದರು. ಹೀಗಾಗಿ ಸಿನಿಮಾಗೆ ಘೂಮರ್ ಎಂದು ಹೆಸರಿಡಲಾಗಿದೆ. ಆಕೆಯ ಬದುಕಿಗೆ ದಾರಿದೀಪವಾಗಿ ಬಂದ ಕೋಚ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಅನಿನಾ ಪಾತ್ರದಲ್ಲಿ ಸಯಾಮಿ ನಟಿಸಿದ್ದಾರೆ.
ಇದನ್ನೂ ಓದಿ: 31ನೇ ವಸಂತಕ್ಕೆ ಕಾಲಿರಿಸಿದ ಕಿಯಾರಾ ಅಡ್ವಾಣಿ: ಕೇಕ್ ಕತ್ತರಿಸಿ ಸಂಭ್ರಮಿಸಿದ ತಾರೆ