ಅಕ್ಟೋಬರ್ 28ರಂದು ಗಂಧದ ಗುಡಿ ಚಿತ್ರವನ್ನ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಹಿನ್ನೆಲೆ ಪುನೀತ್ ಪರ್ವ ಹೆಸರಲ್ಲಿ ಇಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಅದ್ದೂರಿ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಗುತ್ತಿದೆ. ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಜ್ ಕುಟುಂಬ ಈ ಪುನೀತ್ ಪರ್ವ ಅದ್ದೂರಿ ಕಾರ್ಯಕ್ರಮ ಮಾಡುತ್ತಿದ್ದಾರೆ.
ಇನ್ನು ಈ ಗಂಧದ ಗುಡಿಯ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ಗಳು ಬರ್ತಾ ಇದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ , ತಮಿಳು ನಟ ಕಮಲ್ ಹಾಸನ್, ನಟ ವಿಜಯ್, ಪ್ರಭುದೇವ, ಬಾಲಯ್ಯ, ರಾಣಾ ದಗ್ಗುಬಾಟಿ ಸೇರಿದಂತೆ ಇಡೀ ಕನ್ನಡ ಚಿತ್ರರಂಗದ ಎಲ್ಲ ನಟ - ನಟಿಯರು ಈ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಬರೋಬ್ಬರಿ ಐದು ಎಕರೆ ಜಾಗದಲ್ಲಿ ಗಂಧದ ಗುಡಿ ಇವೆಂಟ್ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ವಿಐಪಿ ಹಾಗೂ ವಿವಿಐಪಿಗಳು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ಸೇರುತ್ತಿದ್ದಾರೆ. ಈ ಹಿನ್ನೆಲೆ 80-60ಅಳತೆಯ 10 ಅಡಿ ಎತ್ತರದಲ್ಲಿ ವೇದಿಕೆ ರೆಡಿಯಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುತ್ತಲೂ LED ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ.
500ಕ್ಕೂ ಹೆಚ್ಚು ವಿವಿಐಪಿಗಳು, 5000 ವಿಐಪಿಗಳು ಹಾಗೂ ಅಭಿಮಾನಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತಾ ಎಂಟು ಎಲ್ಇಡಿ ಸ್ಕ್ರೀನ್ಗಳ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗಾಗಿ ಮೂರು ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ನಿಂತು ನೋಡುವ ಅವಕಾಶ ಕಲ್ಪಿಸಲಾಗಿದೆ.
ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ 50ಕ್ಕೂ ಹೆಚ್ಚು ಪುನೀತ್ ರಾಜ್‍ಕುಮಾರ್ ಕಟೌಟ್ಗಳನ್ನ ಹಾಕಲಾಗಿದೆ. ಎಲ್ಲ ರಾಜ್ಯದಿಂದ ಅಭಿಮಾನಿಗಳು ಅರಮನೆ ಮೈದಾನ ಹತ್ತಿರ ಸುಳಿಯುತ್ತಿದ್ದಾರೆ. ಸಂಜೆ 6.30ರಿಂದ 9 ಗಂಟೆಯವರೆಗೂ ಈ ಪುನೀತ್ ಪರ್ವ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮಲ್ಲಿ ಮುಖ್ಯವಾಗಿ ಗಂಧದ ಗುಡಿ ಚಿತ್ರದಿಂದ ಒಂದು ಸರ್ ಪ್ರೈಸ್ ಇದೆ.
ಜೊತೆಗೆ ಗಾಯಕ ವಿಜಯ್ ಪ್ರಕಾಶ್, ಆರ್ಮನ್ ಮಲ್ಲಿಕ್, ಕುನಾಲ್ ಅವರಿಂದ ಪುನೀತ್ ರಾಜ್‍ಕುಮಾರ್ ನಟನೆಯ ಚಿತ್ರಗಳ ಹಾಡುಗಳನ್ನ ಹಾಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಮ್ಯಾ, ಪ್ರಭುದೇವ ಅವರಿಂದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಲಿದ್ಧಾರೆ. ಬಳಿಕ ಪುನೀತ್ ರಾಜ್‍ಕುಮಾರ್ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ನಟರು, ರಾಜಕೀಯ ಗಣ್ಯರು ಅಪ್ಪು ಜೊತೆಗಿನ ಒಡನಾಟವನ್ನ ಹಂಚಿಕೊಳ್ಳಲಿದ್ದಾರೆ.
ದಕ್ಷಿಣ ಭಾರತದ ತಾರೆಯರು, ಕನ್ನಡ ಚಿತ್ರರಂಗದ ತಾರೆಯರು ಮತ್ತ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು ಹಾಗು ಲಕ್ಷಾಂತರ ಅಭಿಮಾನಿಗಳು ಪುನೀತ್ ಪರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ.
ಓದಿ: ಕನ್ನಡ ರಾಜ್ಯೋತ್ಸವದಂದು ಪುನೀತ್‌ಗೆ ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ಪ್ರದಾನ