ಟೈಗರ್ ಶ್ರಾಫ್ ಹಾಗೂ ಕೃತಿ ಸನೋನ್ ನಟನೆಯ 'ಗಣಪತ್: ಎ ಹೀರೋ ಈಸ್ ಬಾರ್ನ್' ನಿನ್ನೆ ಚಿತ್ರಮಂದಿಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. 2023ರ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಇತ್ತ, ಬಾಕ್ಸ್ ಆಫೀಸ್ ಅಂಕಿ ಅಂಶ ಕೂಡ ಸಾಧಾರಣವಾಗಿದೆ.
ವಿಕಾಸ್ ಬಹ್ಲ್ ನಿರ್ದೇಶನದ ಆ್ಯಕ್ಷನ್ ಡ್ರಾಮಾ ಅಕ್ಟೋಬರ್ 20 ರಂದು ತೆರೆಗಪ್ಪಳಿಸಿತು. ಪ್ರೇಕ್ಷಕರು - ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಟೈಗರ್ ಶ್ರಾಫ್ ಹಾಗೂ ಕೃತಿ ಸನೋನ್ ಜೊತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಸಾಧಾರಣ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿರುವ 'ಗಣಪತ್' ವಾರಾಂತ್ಯ (ಇಂದು, ನಾಳೆ) ಉತ್ತಮ ಸಂಖ್ಯೆ ಹೊಂದುವ ನಿರೀಕ್ಷೆ ಇದೆ.
ಗಣಪತ್ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಗಣಪತ್ ತನ್ನ ಮೊದಲ ದಿನ 2.5 ಕೋಟಿ ರೂ. ಸಂಪಾದನೆ ಮಾಡಿದೆ. ನಟ ಟೈಗರ್ ಶ್ರಾಫ್ ವೃತ್ತಿಜೀವನದಲ್ಲಿ ಇದು ಕಡಿಮೆ ಅಂಕಿ ಅಂಶ ಎಂದು ಹೇಳಲಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಸಿನಿಮಾ ಎರಡನೇ ದಿನ 2.36 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಆಗ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಗಣಪತ್‌ನ ಒಟ್ಟು (2 ದಿನದ ಗಳಿಕೆ) ಕಲೆಕ್ಷನ್ 4.86 ಕೋಟಿ ರೂಪಾಯಿ ಆಗಲಿದೆ.
ಇದನ್ನೂ ಓದಿ: ಎಸ್.ಎಲ್ ಭೈರಪ್ಪ ಅವರ 'ಪರ್ವ' ತೆರೆಮೇಲೆ: ಸಿನಿಮಾ ಘೋಷಿಸಿದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಮಿಶ್ರ ವಿಮರ್ಷೆ ವ್ಯಕ್ತ: ಟೈಗರ್ ಶ್ರಾಫ್ ಹಾಗೂ ಕೃತಿ ಸನೋನ್ 'ಹೀರೋಪಂತಿ' ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದರು. ಸುಮಾರು ಒಂಭತ್ತು ವರ್ಷಗಳ ನಂತರ 'ಗಣಪತ್: ಎ ಹೀರೋ ಈಸ್ ಬಾರ್ನ್' ಚಿತ್ರದಲ್ಲಿ ಮತ್ತೆ ತೆರೆ ಹಂಚಿಕೊಂಡಿದ್ದಾರೆ. ದೀರ್ಘ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಹಳ ಉತ್ಸುಕರಾಗಿದ್ದರು. ಆದ್ರೆ ಚಿತ್ರ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ವಿಮರ್ಷೆ ವ್ಯಕ್ತವಾಗಿದೆ. ನಕಾರಾತ್ಮಕ ವಿಮರ್ಶೆಗಳು ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: 'ತೆಲುಸು ಕದಾ'.. ಶ್ರೀನಿಧಿ ಶೆಟ್ಟಿ ಜನ್ಮದಿನ: 'ಕೆಜಿಎಫ್ ನಿಧಿ'ಗೆ ಶುಭಾಶಯಗಳ ಮಹಾಪೂರ
ಚಿತ್ರದ ಬಜೆಟ್ 150 ಕೋಟಿ ರೂ.: ವಿಕಾಸ್ ಬಹ್ಲ್ ಹಾಗೂ ಜಾಕಿ ಭಗ್ನಾನಿ ನಿರ್ಮಾಣದ 'ಗಣಪತ್' ಚಿತ್ರದ ಒಟ್ಟು ಬಜೆಟ್ ಸರಿಸುಮಾರು 150 ಕೋಟಿ ರೂ. ಅಕ್ಟೋಬರ್ 20ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಿದೆ.