ಸೆಪ್ಟೆಂಬರ್ 28ರಂದು ಬಹುಭಾಷಾ ಸಿನಿಮಾಗಳು ಬಿಡುಗಡೆಯಾಗಿ ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿವೆ. ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಪೈಪೋಟಿ ಇದ್ದರೂ, ಉತ್ತಮ ಕಲೆಕ್ಷನ್ ಮುಂದುವರೆಸಿದೆ. ಚಂದ್ರಮುಖಿ 2, ಫುಕ್ರೆ 3, ದಿ ವ್ಯಾಕ್ಸಿನ್ ವಾರ್, ಸ್ಕಂದ, ತೋತಾಪುರಿ 2, ಬಾನ ದಾರಿಯಲಿ, ಚಿತ್ತ ಹೀಗೆ ಬೇರೆ ಬೇರೆ ಭಾಷೆಯ ಚಿತ್ರಗಳು ಸಿನಿ ಪ್ರೇಮಿಗಳನ್ನು ಮನರಂಜಿಸುತ್ತಿವೆ.
ಚಂದ್ರಮುಖಿ 2: ನಟ, ನಿರ್ದೇಶಕ, ಕೊರಿಯೋಗ್ರಾಫರ್ ರಾಘವ ಲಾರೆನ್ಸ್ ಹಾಗೂ ಬಾಲಿವುಡ್ ಕ್ವೀನ್ ಖ್ಯಾತಿಯ ಕಂಗನಾ ರಣಾವತ್ ಅಭಿನಯದ ಚಂದ್ರಮುಖಿ 2 ಬಾಕ್ಸ್ ಆಫೀಸ್ನಲ್ಲಿ ಯೋಗ್ಯ ಅಂಕಿಅಂಶ ಹೊಂದಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಪಿ. ವಾಸು ನಿರ್ದೇಶನದ ಈ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಹುಬೇಡಿಕೆ ನಟಿ ಜ್ಯೋತಿಕಾ ಮುಖ್ಯಭೂಮಿಕೆಯ ಚಂದ್ರಮುಖಿಯ ಸೀಕ್ವೆಲ್. ಈ ಚಿತ್ರ ಬಿಡುಗಡೆಯಾದ ಮೂರನೇ ದಿನದಂದು 6.6 ಕೋಟಿ ರೂಪಾಯಿ ಗಳಿಸಿದೆ. ನಾಲ್ಕನೇ ದಿನವಾದ ಇಂದು 5.2 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ.
ಫುಕ್ರೆ 3: ಫುಕ್ರೆ 3 ತೆರೆ ಕಂಡ ಮೊದಲ ದಿನದಿಂದಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರವು 3ನೇ ದಿನದಂದು 10.52 ಕೋಟಿ ರೂಪಾಯಿ ಗಳಿಸಿದೆ. ಶುಕ್ರವಾರ 7.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದು ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಭಾರತದಲ್ಲಿ ಈ ಚಿತ್ರ ಒಟ್ಟು 13 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆ ಇದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಪುಲ್ಕಿತ್ ಸಾಮ್ರಾಟ್, ರಿಚಾ ಚಡ್ಡಾ, ಪಂಕಜ್ ತ್ರಿಪಾಠಿ ಮತ್ತು ವರುಣ್ ಶರ್ಮಾ ಸೇರಿದಂತೆ ಅನೇಕರು ನಟಿಸಿದ್ದಾರೆ.
ದಿ ವ್ಯಾಕ್ಸಿನ್ ವಾರ್: ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿರುವ ದಿ ವ್ಯಾಕ್ಸಿನ್ ವಾರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಅಂಕಿಅಂಶದೊಂದಿಗೆ ಆರಂಭವಾಗಿದೆ. ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿದ್ದರೂ, ಸಿನಿಮಾ ಗಳಿಕೆಯ ಮಾಹಿತಿ ನೋಡಿದರೆ ಕಲೆಕ್ಷನ್ ಸಾಧಾರಣವಾಗಿದೆ. ಬಿಡುಗಡೆಯಾದ ಮೊದಲ ದಿನ 80 ಲಕ್ಷ ರೂ. ಮತ್ತು ಎರಡನೇ ದಿನ 90 ಲಕ್ಷ ರೂಪಾಯಿ ಗಳಿಸಿತ್ತು. ಶನಿವಾರ ಕಲೆಕ್ಷನ್ನಲ್ಲಿ ಕೊಂಚ ಏರಿಕೆ ಕಂಡಿದ್ದು, 1.50 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 3.25 ಕೋಟಿ ರೂಪಾಯಿ ಆಗಿದೆ.
ಸ್ಕಂದ: ಪ್ಯಾನ್ ಇಂಡಿಯಾ ಸಿನಿಮಾ ಸ್ಕಂದ ತೆರೆಗಪ್ಪಳಿಸಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಪೋತಿನೇನಿ, ಶ್ರೀಲೀಲಾ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಶನ್ನ ಸ್ಕಂದ ತೆಲುಗು ಚಿತ್ರಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಚಿತ್ರವು ಶನಿವಾರ 5.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಸ್ಯಾಂಡಲ್ವುಡ್ನ ತೋತಾಪುರಿ 2 ಮತ್ತು ಬಾನ ದಾರಿಯಲಿ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗಳ ಕಲೆಕ್ಷನ್ ಮಾಹಿತಿ ಲಭ್ಯವಾಗಿಲ್ಲ. ತೋತಾಪುರಿ 2 ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಬಾನ ದಾರಿಯಲಿ.
ಇದನ್ನೂ ಓದಿ: ₹10 ಕೋಟಿ ಬಜೆಟ್ನ 'ದಿ ವ್ಯಾಕ್ಸಿನ್ ವಾರ್' ಮೊದಲ ದಿನ ಗಳಿಸಿದ್ದು ₹1 ಕೋಟಿ