ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರ ಕುಟುಂಬದಲ್ಲಿ ನಾಮಕರಣದ ಸಂಭ್ರಮ ಮನೆ ಮಾಡಿದೆ. ನಿನ್ನೆಯಷ್ಟೇ ನಟ ಹಾಗು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಪುತ್ರನ ನಾಮಕರಣ ಕಾರ್ಯವನ್ನು ಜೆ. ಪಿ ನಗರದ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಮಾಜಿ ಪ್ರಧಾನಮಂತ್ರಿ ಹೆಚ್. ಡಿ ದೇವೇಗೌಡ, ಚನ್ನಮ್ಮ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಪೂಜಾ ಕಾರ್ಯಗಳು, ಶಾಸ್ತ್ರಗಳನ್ನು ಮಾಡಿದರು. ಈ ವೇಳೆ ದೇವೇಗೌಡರು ಮರಿ ಮೊಮ್ಮಗನಿಗೆ ಸಿಹಿಮುತ್ತು ನೀಡುವ ಮೂಲಕ ಮರಿ ಮೊಮ್ಮಗನಿಗೆ ಕನಕಾಭಿಷೇಕ ಶಾಸ್ತ್ರ ನೆರವೇರಿಸಿದರು.
ಜೆ. ಪಿ ನಗರದ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನ, ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನ, ಯೋಗನರಸಿಂಹ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಿಖಿಲ್ ಕುಮಾರಸ್ವಾಮಿ, ರೇವತಿ ಪುತ್ರನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಅವ್ಯಾನ್ ಎಂದರೆ ಗಣೇಶ ಹಾಗೂ ವಿಷ್ಣು ದೇವರುಗಳ ಹೆಸರು.
ನಾಮಕರಣದ ಸುಂದರ ಕ್ಷಣಗಳ ವಿಡಿಯೋ ಅನಾವರಣ.. ಈ ಹೆಸರನ್ನು ರೇವತಿಯವರೇ ಹುಡುಕಿದ್ದು ಅಪ್ಪ, ಅಮ್ಮ, ಅಜ್ಜಿ, ತಾತ ಎಲ್ಲರೂ ಇಷ್ಟಪಟ್ಟಿದ್ದಾರೆ. ಮತ್ತೊಂದು ಕಡೆ ಅವ್ಯಾನ್ ಅಂದ್ರೆ ಎಲ್ಲಾ ವಿಚಾರದಲ್ಲಿ ಪರ್ಫೆಕ್ಟ್ ಅನ್ನೋದು ಈ ಹೆಸರಿಗೆ ಇರುವ ಅರ್ಥ. ಈ ಕಾರ್ಯಕ್ರಮದಲ್ಲಿ ಹೆಚ್. ಡಿ. ದೇವೇಗೌಡ ಅವರ ಎಲ್ಲಾ ಕುಟುಂಬದ ಸದಸ್ಯರು, ರೇವತಿ ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು. ಈ ನಾಮಕರಣದ ಸುಂದರ ಕ್ಷಣಗಳ ವಿಡಿಯೋ ಅನಾವರಣಗೊಂಡಿದೆ.
ಪಕ್ಷದ ವತಿಯಿಂದಲೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಓದಿ: ಪರಿಷ್ಕೃತ ಪಠ್ಯ ರದ್ದತಿಗೆ ಆಗ್ರಹಿಸಿ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ