ರಾಜ್ಯದಲ್ಲಿ ಕನ್ನಡದ ಸಿಂಗಂ ಎಂದೇ ಹೆಸರುವಾಸಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಸದ್ದಿಲ್ಲದೇ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸಿದ್ದಾರೆ. ಮತ್ತೊಂದು ವಿಶೇಷ ಸಂಗತಿ ಅಂದರೆ, ವಿಕಲಚೇತನ ಈಜು ಪಟು ಕೆ.ಎಸ್.ವಿಶ್ವಾಸ್ ಅಭಿನಯಿಸುತ್ತಿರುವ 'ಅರಬ್ಬೀ' ಎಂಬ ಚಿತ್ರದಲ್ಲಿ ಅವರು ಮುಖಕ್ಕೆ ಬಣ್ಣ ಹಚ್ಚಿದ್ದಾರೆ.
ಐಪಿಎಸ್ ವೃತ್ತಿಗೆ ರಾಜಿನಾಮೆ ನೀಡಿ ಈಗ ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷರಾಗಿ ಅಣ್ಣಾಮಲೈ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತ, ಎರಡು ಕೈಗಳು ಇಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಈಜು ಪಟುವಾಗಿ ಸಕ್ಸಸ್ ಕಂಡಿರುವ ಕೆ.ಎಸ್.ವಿಶ್ವಾಸ್ 'ಅರಬ್ಬೀ' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಣ್ಣಾಮಲೈ ಸ್ವಿಮ್ಮಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ರಾಜ್ಕುಮಾರ್ ಆರ್. ನಿರ್ದೇಶನವಿದ್ದು, ಲಾಕ್ ಡೌನ್ ಸಂದರ್ಭದಲ್ಲೇ ಒಂದು ಭಾಗದ ಶೂಟಿಂಗ್ ಮಾಡಿ ಮುಗಿಸಿದ್ದಾರೆ.
ನಿರ್ದೇಶಕರಾಗಿ ರಾಜ್ಕುಮಾರ್ 'ಬಡ್ತಿ': 16 ವರ್ಷಗಳಿಂದ ಕನ್ನಡ, ತೆಲುಗು, ತಮಿಳಿನ ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ರಾಜ್ಕುಮಾರ್, ಕೆ.ಎಸ್.ವಿಶ್ವಾಸ್ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಆಧರಿಸಿ 'ಅರಬ್ಬೀ' ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿಯೂ ಅವರು ಬಡ್ತಿ ಪಡೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ರೂಪಾಯಿ ಸಂಭಾವನೆ ಪಡೆಯದೇ ಅಣ್ಣಾಮಲೈ ಅಭಿನಯಿಸಿದ್ದಾರೆ ಅಂದು ರಾಜ್ಕುಮಾರ್ ಹೇಳಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಸಿನಿಮಾಗೆ ನಿರ್ದೇಶನ ಮಾಡುತ್ತಿರುವ ರಾಜ್ಕುಮಾರ್, ಎರಡು ಗೀತೆಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಆಯುಷ್ ಮಂಜು ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಆನಂದ್ ದಿಂಡವಾರ್ ಮತ್ತು ಸಂಕಲನ ಸುನಿಲ್ ಕಶ್ಯಪ್ ಮಾಡಿದ್ದಾರೆ. ಕಲೆ ಮೋಹನ್‍ಕುಮಾರ್ ಹಾಗೂ ಅಕನ್ ಆನಂದ್ ನೃತ್ಯ ಸಂಯೋಜಿಸಿದ್ದಾರೆ. ಚೇತನ್.ಸಿ.ಎಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
'ಹಿಂದಿ'ಗೆ ಮಹೇಶ್ ಭಟ್ ಆಸಕ್ತಿ: ಮೊದಲು ಕನ್ನಡದಲ್ಲಿ 'ಅರಬ್ಬೀ' ಬಿಡುಗಡೆಯಾದ ಬಳಿಕ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಬಿಡುಗಡೆ ಮಾಡುವ ಯೋಚನೆ ಇದೆ. ನಿರ್ದೇಶಕ ರಾಜ್ಕುಮಾರ್ ಪ್ರಕಾರ ಬಾಲಿವುಡ್ ಪ್ರಖ್ಯಾತ ನಿರ್ದೇಶಕ ಮಹೇಶ್ ಭಟ್ ಈ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಆಸಕ್ತಿ ತೋರಿದ್ದಾರಂತೆ.
ಇದನ್ನೂ ಓದಿ: 'ಕ್ಷೇತ್ರಪತಿ' ಫಸ್ಟ್ ಲುಕ್ ಬಿಡುಗಡೆ ಮಾಡಿದ ಡಾಲಿ ಧನಂಜಯ್