ಬೆಂಗಳೂರು: ಹಲವು ವಿವಾದದ ಬಳಿಕ ಮದುವೆ, ಹನಿಮೂನ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದವರು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೋಡಿ. ಮೂರನೇ ಹೆಂಡತಿ ವಿಚ್ಛೇದನ ನೀಡದೇ ಈ ಜೋಡಿ ಮದುವೆಯಾದರಾ ಎಂದು ಹಲವರು ಕಣ್ಣರಳಿಸಿದ್ದರೂ ಕೂಡ. ಈ ವಿಡಿಯೋಗಳ ಮೂಲಕ ಕೇವಲ ಸಿನಿಮಾದ ಪ್ರೋಮೋಷನ್ ಎಂಬುದು ಕೆಲವು ದಿನಗಳ ಹಿಂದೆ ಬಹಿರಂಗವಾಗಿತ್ತು. ಇದೀಗ ಈ ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಿದೆ. ಆ ಚಿತ್ರವೇ ಮತ್ತೆ ಮದುವೆ. ತೆಲುಗು ಮತ್ತು ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಚಿತ್ರ ಬರುತ್ತಿದೆ.
ವಯಸ್ಕರ ಪ್ರೀತಿ: ಮಧ್ಯವಯಸ್ಸಿನಲ್ಲಿ ಪ್ರೀತಿಯಿಂದ ವಂಚಿತರಾಗುವ ಜೋಡಿ, ಹೇಗೆ ನಡುವಯಸ್ಸಿನಲ್ಲಿ ಪರಸ್ಪರ ಪ್ರೀತಿಯನ್ನು ಕಂಡುಕೊಂಡು ಒಂದಾಗುತ್ತಾರೆ ಎಂಬ ಚಿತ್ರಕಥೆ ಹೊಂದಿದೆ ಈ ಸಿನಿಮಾ. ಮೂಲಗಳ ಪ್ರಕಾರ ನರೇಶ್ ಅವರೇ ತಮ್ಮ ಕಥೆಯನ್ನು ಸಿನಿಮಾ ಮೂಲಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ನರೇಶ್ ಮತ್ತು ಪವಿತ್ರ ಪ್ರೀತಿ ಕುರಿತು ಸಾಕಷ್ಟು ಸುದ್ದಿಯಾಗಿರುವ ಹಿನ್ನಲೆ ಈ ಕುರಿತು ಪ್ರಶ್ನೆಗಳಿಗೂ ಚಿತ್ರದಲ್ಲಿ ಉತ್ತರ ಸಿಗಲಿದೆ ಎನ್ನಲಾಗಿದೆ.
ಮಧ್ಯ ವಯಸ್ಸಿನಲ್ಲಿ ನಡೆಯುವ ಮತ್ತೆ ಮದುವೆ ಚಿತ್ರ ಕಥೆಯನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದು, ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ಚಿತ್ರ ಹೊರ ಬರುತ್ತಿದೆ. ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ.
ಎರಡು ಭಾಷೆಯಲ್ಲೂ ನಿರ್ಮಾಣ: ನರೇಶ್ ಜೊತೆ ಪವಿತ್ರಾ ಲೋಕೇಶ್ ಜೋಡಿಯಾಗಿ ನಟಿಸಿರುವ ‘ಮತ್ತೆ ಮದುವೆ’ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿತ್ತು. ಇದೀಗ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾ ತಂಡ ಫಸ್ಟ್ ಲುಕ್ ಮೂಲಕ ಸಿನಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಏಪ್ರಿಲ್ ಅಥವಾ ಮೇ ನಲ್ಲಿ ತೆರೆ ಕಾಣಲಿದೆ.
‘ಮತ್ತೆ ಮದುವೆ’ ಕೌಟುಂಬಿಕ ಮನರಂಜನೆಯ ಚಿತ್ರವಾಗಿದೆ. ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಫಸ್ಟ್ ಲುಕ್ ಮತ್ತು ಹಲವು ವಿಡಿಯೋಗಳ ಮೂಲಕ ಈಗಾಗಲೇ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸುವುದಾಗಿ ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ಹೃದಯಾಘಾತದ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ