ಪಣಜಿ (ಗೋವಾ): ಸಿನಿಮಾಗಳು ಈಗ ಭಾಷೆಯ ಗಡಿ ದಾಟುತ್ತಿವೆ ಎಂದು ಕಾಂತಾರ ಸಾರಥಿ ರಿಷಬ್ ಶೆಟ್ಟಿ ಹೇಳಿದ್ದಾರೆ. "ಕಂಟೆಂಟ್ ಪ್ರೇಕ್ಷಕರಿಗೆ ಕನೆಕ್ಟ್ ಆಗಿದ್ದರೆ ಸಿನಿಮಾವನ್ನು ಭಾರತೀಯ ಸಿನಿಮಾ ಎಂದು ಒಪ್ಪಿಕೊಳ್ಳಲಾಗುತ್ತದೆ" ಎಂದು ತಿಳಿಸಿದರು.
ಗೋವಾದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ವೇದಿಕೆಯಲ್ಲಿ 'ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿನಿಧಿಸುವುದು ಮತ್ತು ಹೊಸ ಮಾರುಕಟ್ಟೆಗಳನ್ನು ಗುರುತಿಸುವುದು' ವಿಷಯದ ಕುರಿತು ಮಾಸ್ಟರ್‌ಕ್ಲಾಸ್‌ನಲ್ಲಿ ನಟ ರಿಷಬ್ ಶೆಟ್ಟಿ ಮಾತನಾಡಿದರು.
"ಇಂದು ಚಲನಚಿತ್ರಗಳು ಭಾಷೆಯ ತಡೆಗೋಡೆ ಒಡೆದು ದಾಟುತ್ತಿವೆ. ವಿಷಯವು ಪ್ರೇಕ್ಷಕರೊಂದಿಗೆ ಸಂಪರ್ಕ ಹೊಂದಿದರೆ ಸಿನಿಮಾಗಳನ್ನು ಭಾರತೀಯ ಚಲನಚಿತ್ರವಾಗಿ ಸ್ವೀಕರಿಸಲಾಗುತ್ತದೆ. ಚಲನಚಿತ್ರಗಳು ಹೆಚ್ಚು ಸ್ಥಳೀಯರಾಗಿದ್ದರೆ, ಅದು ಹೆಚ್ಚಿನ ಆಕರ್ಷಣೆ ಹೊಂದುತ್ತದೆ ಎಂಬ ಮಂತ್ರವನ್ನು ನಾನು ನಂಬಿದ್ದ್ದೇನೆ'' ಎಂದು ಅವರು ಹೇಳಿದರು.
ಕಾಂತಾರ ಮಾನವರು ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪ್ರಸ್ತುತ ಪಡಿಸಿದೆ. ಇದು ಪ್ರಕೃತಿ, ಸಂಸ್ಕೃತಿ ಮತ್ತು ಕಾಲ್ಪನಿಕ ಕಥೆಗಳ ಸಮ್ಮಿಲನವಾಗಿದೆ. ಸಂಸ್ಕೃತಿಗಳು ಮತ್ತು ನಂಬಿಕೆಗಳು ಪ್ರತಿಯೊಬ್ಬರಲ್ಲೂ ಬೇರೂರಿದೆ. ಈ ಚಲನಚಿತ್ರವು ನಾನು ಕೇಳಿದ ಜಾನಪದ ಮತ್ತು ಬಾಲ್ಯದ ತುಳುನಾಡು ಸಂಸ್ಕೃತಿಯ ಅನುಭವಗಳ ಫಲಿತಾಂಶವಾಗಿದೆ. ಚಿತ್ರದ ಹಿನ್ನೆಲೆ ಸಂಗೀತ ಸಹಜವಾಗಿಯೇ ಸಂಸ್ಕೃತಿಯ ದಾರಿದೀಪವಾಗಬೇಕೆಂದು ಬಯಸುತ್ತೇನೆ ಎಂದರು.
ಇದನ್ನೂ ಓದಿ: ಧೂಮಂ ಶೂಟಿಂಗ್ ಅಡ್ಡಕ್ಕೆ ವಿಜಯ್ ಕಿರಗಂದೂರು, ರಿಷಭ್ ಶೆಟ್ಟಿ ಭೇಟಿ