ಬೆಂಗಳೂರು: ಕನ್ನಡ ಚಿತ್ರರಂಗದ ಬಹುಮುಖ್ಯ ಅಂಗ ಎಂದು ಕರೆಯಿಸಿಕೊಂಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಒಂದು ದಿನ ಬಾಕಿ ಇದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಾಳೆ 28 ರಂದು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕಾಗಿ ಚುನಾವಣೆ ನಡೆಯುತ್ತಿದೆ. ಸದ್ಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ. ಮಾ ಹರೀಶ್ ಹಾಗೂ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಈಗಾಗಲೇ ಒಂದು ಬಾರಿ ಫಿಲ್ಮ್ಸ್ ಚೇಂಬರ್ ಅಧ್ಯಕ್ಷನಾಗಿ ಅಧಿಕಾರ ಮಾಡಿದ್ದ ಸಾ.ರಾ ಗೋವಿಂದು ತಮ್ಮ ಅಧಿಕಾರ ಅವಧಿಯಲ್ಲಿ ಫಿಲ್ಮ್ ಚೇಂಬರ್ನ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹಿರಿಯ ನಿರ್ದೇಶಕ ಎಸ್. ವಿ ರಾಜೇಂದ್ರಸಿಂಗ್ ಬಾಬು, ನಟ ಸುಂದರರಾಜ್, ನಿರ್ಮಾಪಕರಾದ ಶೈಲೇಂದ್ರ ಬಾಬು, ಸೇರಿದಂತೆ ಕೆಲ ನಿರ್ದೇಶಕರು ಸಾ. ರಾ ಗೋವಿಂದು ವಿರುದ್ಧ ಆರೋಪ ಮಾಡಿ ತನಿಖೆ ಆಗಲಿ ಅಂತಾ ಒತ್ತಾಯಿಸಿದರು.
ಇನ್ನು ಮತ್ತೊಂದು ಕಡೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಭಾ. ಮಾ ಹರೀಶ್ ಆಯೋಜಿಸಿದ್ದ ಚುನಾವಣಾ ಸಭೆಯಲ್ಲಿ ಹಿರಿಯ ನಟಿ ಜಯಮಾಲ ಪರೋಕ್ಷವಾಗಿ ಸಾ.ರಾ ಗೋವಿಂದು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರವಾಗಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಸಾ.ರಾ ಗೋವಿಂದು ಸುದ್ದಿಗೋಷ್ಠಿ ಮಾಡಿದರು. ನಿರ್ಮಾಪಕರಾದ ಎನ್. ಎಂ ಸುರೇಶ್, ಎ. ಗಣೇಶ್, ಹಿರಿಯ ನಟ ಕರಿಸುಬ್ಬು, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಿರ್ಮಾಪಕ ಮುಸುರಿ ಜಯಸಿಂಹ ಸೇರಿದಂತೆ ಸಾಕಷ್ಟು ನಿರ್ಮಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣೆಗೋಸ್ಕರ ಪತ್ರಿಕಾಗೋಷ್ಠಿ ಮಾಡಿಲ್ಲ.. ಸಾ.ರಾ ಗೋವಿಂದ್ ಮೇಲಿನ ಆರೋಪಗಳಿಗೆ ದಾಖಲೆ ಸಮೇತ, ನಿರ್ದೇಶಕ ಎಸ್. ವಿ ರಾಜೇಂದ್ರಸಿಂಗ್, ನಟಿ ಜಯಮಾಲ, ನಟಿ ಜಯಮಾಲ ಹಾಗೂ ಯಾರು ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ ಅವರಿಗೆ ಉತ್ತರ ಕೊಡಲು ಈ ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ. ನಾನು ಚುನಾವಣೆಗೋಸ್ಕರ ಪತ್ರಿಕಾಗೋಷ್ಠಿ ಮಾಡಿಲ್ಲ ಎಂದರು. ನಾನು 2016ರಿಂದ 2018ವರೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿದ್ದಾಗ ಏನೆಲ್ಲ ಕೆಲಸ ಮಾಡಿದ್ದೀನಿ ಎಂಬುದರ ಬಗ್ಗೆ ಸಾ.ರಾ ಗೋವಿಂದು ಉತ್ತರ ಕೊಟ್ಟರು.
ಅದರಲ್ಲಿ ಫಿಲ್ಮ್ ಚೇಂಬರ್ ಶೌಚಾಲಯ ಕಟ್ಟುವ ವಿಚಾರದಲ್ಲಿ 35 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿ ತಪ್ಪು ಲೆಕ್ಕ ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರ ಬಗ್ಗೆ ಸಾ. ರಾ ಗೋವಿಂದು ದಾಖಲೆ ಕೊಟ್ಟು, ನೋಡಿ 15 ಲಕ್ಷ ರೂಪಾಯಿ ಮಾತ್ರ ಖರ್ಚು ಆಗಿದೆ ಎಂದು ಲೆಕ್ಕ ಕೊಟ್ಟರು. ಎಲ್ಲರೂ ನನ್ನ ಮೇಲೆ ಆರೋಪ ಮಾಡಿದ್ದಾರೆ. ಚುನಾವಣೆ ಆದಮೇಲೆ ಸಂಪೂರ್ಣ ಲೆಕ್ಕಪತ್ರ ಮೂಲಕ ಉತ್ತರ ಕೊಡ್ತೀನಿ ಎಂದರು.
ಆರೋಪದ ಮೇಲೆ ತನಿಖೆ ಆಗಲಿ ಎಂದು ನಾನೇ ಹೇಳಿದ್ದು..ಇನ್ನು ಫಿಲ್ಮ್ ಚೇಂಬರ್ ಇದು ರಾಜಕೀಯ ಸಂಸ್ಥೆ ಅಲ್ಲ. ಸಾಂಸ್ಕೃತಿಕ ಸಂಸ್ಥೆ. ಅದನ್ನ ಭಾ.ಮಾ ಹರೀಶ್ ಬೀಗ ಹಾಕಿಸಲು ಯಾಕೆ ಹೋಗಿದ್ದರು. ನನ್ನ ಮೇಲೆ ಕೇಳಿ ಬಂದ ಆರೋಪದ ಮೇಲೆ ತನಿಖೆ ಆಗಲಿ ಎಂದು ನಾನೇ ಹೇಳಿದ್ದು. ಹೀಗಾಗಿ, ಚುನಾವಣಾ ಇಷ್ಟು ದಿನ ಮುಂದಕ್ಕೆ ಹೋಗೋದಕ್ಕೆ ಅವರೇ ಕಾರಣ. ಆಪಾದನೆ ಹೊತ್ತುಕೊಂಡು ನಾನು ಚುನಾವಣೆಗೆ ಹೋಗಲ್ಲ.
ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸ ಗೊತ್ತಿಲ್ಲ ಅವರಿಗೆ, ಕೋವಿಡ್ ಟೈಮ್ನಲ್ಲಿ ಕಷ್ಟದಲ್ಲಿದ್ದಾರೆ ಅಂದಾಗ ಸಹಾಯ ಮಾಡಿದ್ದೀವಿ. 99 ಲಕ್ಷ ರೂ. ದಲ್ಲಿ ಚಿತ್ರರಂಗದವರಿಗೆ 30 ಸಾವಿರ ಹಣವನ್ನ ಸಹಾಯ ಮಾಡಿದ್ದೀವಿ. ಎನ್ ಕುಮಾರ್ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಆಗಿದ್ದಾಗ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಮಾಡಿಕೊಂಡಿದ್ದು, ಇನ್ನು ಸುಂದರ್ ರಾಜ್ ನಿಮ್ಗೆ ಕೇಳ್ತೀನಿ. ಯಾಕೆ ಆವಾಗ ಮಾತನಾಡಲಿಲ್ಲ. 2008ರಲ್ಲಿ ವೆಲ್ಫೇರ್ ಫಂಡ್ ನಾವು ಮಾಡಿದ್ದು, ಮೂರುವರೆ ಕೋಟಿ ರೂ. ಗಳನ್ನು ಸತ್ತವರಿಗೆ ಹಾಗೂ ಕಷ್ಟದಲ್ಲಿ ಇದ್ದವರಿಗೆ ಕೊಟ್ಟಿದ್ದೀವಿ.
ಒಳ್ಳೆ ಕೆಲಸ ಮಾಡುವಾಗ ಯಾಕೆ ಅಡ್ಡಗಾಲು ಹಾಕುತ್ತಿದ್ದೀರಾ. 12 ಕೋಟಿ ಹಣವನ್ನ ಕ್ಷೇಮ ನಿಧಿಯಲ್ಲಿ ಇಟ್ಟಿದ್ದೀವಿ. ಚುನಾವಣೆಗೋಸ್ಕರ ಕೆಟ್ಟ ಅಪಪ್ರಚಾರ ಮಾಡ್ತಾ ಇದ್ದೀರಾ. ಜನರಿಗೆ ಗೊತ್ತಾಗಲಿ ಅಂತ ಮಾಧ್ಯಮ ಮುಂದೆ ಬಂದಿದ್ದೀನಿ. ಇನ್ನು ಜಯಮಾಲ ಸಮರ್ಥ ನಾಯಕರು. ಫಿಲ್ಮ್ ಚೇಂಬರ್ ಅಧ್ಯಕ್ಷ ಆಗಬೇಕು ಅಂತಾರೆ ಒಳ್ಳೆಯದು. ಆದರೆ, ಜಯಮಾಲ, ಫಿಲ್ಮ್ ಚೇಂಬರ್ ಅಧ್ಯಕ್ಷ ಆಗಬೇಕು ಅಂತಾ ನಾನು ಅವತ್ತು ಜಯಮಾಲಾ ಅವರ ಪರ ನಿಂತಿದ್ದೆ. ಯಾಕೆ ಕೆಟ್ಟ ಮನಸ್ಥಿತಿಯಿಂದ ಮಾತನಾಡುತ್ತಿದ್ದಾರೆ ಅಂತಾ ಜಯಮಾಲ ವಿರುದ್ಧ ಸಾ.ರಾ ಗೋವಿಂದು ಕಿಡಿಕಾಡಿದರು.