ಹೈದರಾಬಾದ್: ದಕ್ಷಿಣ ಭಾರತದಲ್ಲಿ ಅಭಿಮಾನಿಗಳು ತಮ್ಮ ತಾರೆಯರ ವಿಷಯದಲ್ಲಿ ಅತಿರೇಕದ ಅಭಿಮಾನ ತೋರುವುದು ಸಾಮಾನ್ಯ. ಇದೀಗ ತೆಲುಗು ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಇತ್ತೀಚಿನ ಸಿನಿಮಾ 'ವೀರ ಸಿಂಹ ರೆಡ್ಡಿ' ಬಿಡುಗಡೆಯಾಗಿದ್ದು, ಜಗತ್ತಿನ ನಾನಾ ಭಾಗಗಳಲ್ಲಿ ಅತ್ಯುತ್ತುಮ ಪ್ರದರ್ಶನ ಕಾಣುತ್ತಿದೆ. ಕೆಲವು ಸ್ಥಳಗಳಲ್ಲಿ ವಿಚಿತ್ರ ಘಟನಾವಳಿಗಳು ವರದಿಯಾಗಿವೆ.
ಇದೆಂಥಾ ಅಭಿಮಾನ?: ಬಾಲಯ್ಯರ ಚಿತ್ರಕ್ಕಾಗಿ ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದಿಂದ ಸುಮಾರು 200 ಕಾರ್‌ಗಳಲ್ಲಿ ಅಭಿಮಾನಿಗಳ ದಂಡು ಸಿನಿಮಾ ಥಿಯೇಟರ್‌ಗಳತ್ತ ಬಂದಿತ್ತು. ಬಾಲಯ್ಯ ಮೇಲಿನ ಪ್ರೀತಿಯಿಂದ ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ ಅನ್ನೋದು ಅಭಿಮಾನಿಗಳ ಮಾತು. ಆಸ್ಟ್ರೇಲಿಯಾದಲ್ಲೂ ಫ್ಯಾನ್ಸ್ ಕಾರ್‌ಗಳ ಮೂಲಕ ರ‍್ಯಾಲಿ ಕೈಗೊಂಡು ವಿಶೇಷ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಬಾಲಯ್ಯ ಹಾಡಿಗೆ ಕುಣಿದು ಕುಪ್ಪಳಿಸಿದ ಅಜ್ಜ: ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿರುವ ಈ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಮುಂಜಾನೆ 4 ಗಂಟೆಗೆ ಪ್ರದರ್ಶನಗಳು ಆರಂಭವಾಗುತ್ತಿದ್ದಂತೆ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿತ್ತು. ಮೊದಲ ದಿನವೇ ನೆಚ್ಚಿನ ನಟನ ಮೊದಲ ದೇಖಾವೆಗಾಗಿ ಅಭಿಮಾನಿಗಳು ಪೈಪೋಟಿ ನಡೆಸಿದ್ದಾರೆ. ಬಾಲಯ್ಯರ ಡೈಲಾಗ್, ಹಾಡುಗಳಿಗೆ ಶಿಳ್ಳೆ ಹೊಡೆಯುವುದಲ್ಲದೇ ಸ್ಟೆಪ್ಸ್‌ನಲ್ಲೂ ಧೂಳೆಬ್ಬಿಸಿದರು. ಥಿಯೇಟರ್‌ವೊಂದರಲ್ಲಿ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಬಾಲಯ್ಯ ಹಾಡಿಗೆ ಡ್ಯಾನ್ಸ್ ಮಾಡಿದರು. ಈ ವಿಡಿಯೋ ವೈರಲ್ ಆಗಿದೆ.
ಸಿನಿಮಾ ಸ್ಕ್ರೀನ್ಗೆ ಬೆಂಕಿ: ಆಂಧ್ರಪ್ರದೇಶದ ವಿಶಾಖಪಟ್ಟಣದ ಸಬ್ಬವರಂನಲ್ಲಿ ತಾಂತ್ರಿಕ ದೋಷದಿಂದ ಚಿತ್ರ ಅರ್ಧಕ್ಕೆ ನಿಂತಿದೆ. ಇದರಿಂದ ಆಕ್ರೋಶಗೊಂಡ ಕೆಲ ಅಭಿಮಾನಿಗಳು ಚಿತ್ರಮಂದಿರದ ಪರದೆಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಚಿತ್ರಮಂದಿರ ಮಾಲೀಕನಿಗೆ ಅಪಾರ ನಷ್ಟ ಉಂಟಾಗಿದೆ.
ವಿದೇಶದಲ್ಲಿ ಬಾಲಯ್ಯ ಅಭಿಮಾನಿಗಳ ಗದ್ದಲ: ಅಮೆರಿಕದಲ್ಲಿ ಬಾಲಯ್ಯ ಅಭಿಮಾನದ ವೀರ ಸಿಂಹ ರೆಡ್ಡಿ ಸದ್ದು ಮಾಡುತ್ತಿದೆ. ಯುಎಸ್‌ನ ಥಿಯೇಟರ್‌ವೊಂದರಲ್ಲಿ ಅಭಿಮಾನಿಗಳ ಗದ್ದಲದಿಂದ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ. ಈ ಕುರಿತು ನೆಟ್ಟಿನ ಮನೆಯಲ್ಲಿ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಸೆಕ್ಯುರಿಟಿ ಗಾರ್ಡ್‌ವೊಬ್ಬರು ಪ್ರೇಕ್ಷಕರನ್ನು ಉದ್ದೇಶಿಸಿ ಚಲನಚಿತ್ರವನ್ನು ಏಕೆ ನಿಲ್ಲಿಸಲಾಗುತ್ತಿದೆ ಎಂದು ವಿವರಿಸುವುದನ್ನು ತೋರಿಸಲಾಗಿದೆ.
'ಕ್ಷಮಿಸಿ, ಚಲನಚಿತ್ರವನ್ನು ನ್ಯಾಯಯುತವಾಗಿ ವೀಕ್ಷಿಸಲು ಮತ್ತು ಉತ್ತಮ ಮನರಂಜನೆಯ ಸಂಜೆ ಹೊಂದಲು ಕೆಲವರು ಇಲ್ಲಿಗೆ ಬಂದಿದ್ದಾರೆ ಎಂದು ನನಗೆ ತಿಳಿದಿದೆ. ಆದರೆ ನನ್ನನ್ನು ದೂಷಿಸಬೇಡಿ. ಗೊಂದಲ ಉಂಟು ಮಾಡುವವರನ್ನು ದೂಷಿಸಿ. ಈ ಪರಿಸ್ಥಿತಿ ಹಿಂದೆಂದೂ ಸಂಭವಿಸಿಲ್ಲ. ನಾವು ತೆಲುಗು ಚಲನಚಿತ್ರಗಳನ್ನು ಅಥವಾ ಯಾವುದೇ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಆದ್ರೆ ಈ ಘಟನೆ ನಡೆದಿದ್ದು ಇದೇ ಮೊದಲು. ಹೀಗಾಗಿ ಇದು ಸ್ವೀಕಾರಾರ್ಹವಲ್ಲ. ದಯವಿಟ್ಟು ಇಲ್ಲಿಂದ ಎಲ್ಲರೂ ಹೊರಡಬೇಕು' ಎಂದು ಹೇಳಿದ್ದಾರೆ.
ಐದು ಅಡಿ ಉದ್ದದ ಕೇಕ್: ಬೋಸ್ಟನ್ನಲ್ಲಿ ಬಾಲಯ್ಯ ಚಿತ್ರ ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸಾವಿರಾರು ಅಭಿಮಾನಿಗಳು ಚಿತ್ರ ವೀಕ್ಷಿಸಿದ್ದಾರೆ. ಚಿತ್ರದ ಬಳಿಕ ಸಾಗರೋತ್ತರದ ಅಭಿಮಾನಿಗಳು ಸುಮಾರು ಐದು ಅಡಿ ಕೇಕ್ ತಂದು ಸಿನಿಮಾ ಹಾಲ್ನಲ್ಲಿ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: 'ವೀರ ಸಿಂಹ ರೆಡ್ಡಿ' ಚಿತ್ರ ಬಿಡುಗಡೆ: ಪಾವಗಡದಲ್ಲಿ ಅಭಿಮಾನಿಗಳ ಸಂಭ್ರಮ