ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಭಾರೀ ಯಶಸ್ಸನ್ನು ಕಂಡಿದೆ. ಸಲ್ಮಾನ್ ಖಾನ್ ಅತಿಥಿ ಪಾತ್ರ ವಹಿಸಿ ಗಮನ ಸೆಳೆದಿದ್ದರು. ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ, ಹರ್ಷೋದ್ಘಾರ, ಕೂಗು, ಮೆಚ್ಚುಗೆಗಳನ್ನು ಸ್ವೀಕರಿಸಿದೆ. ಸಲ್ಲು ಮತ್ತು ಎಸ್ಆರ್ಕೆ ಪ್ರಪಂಚದಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಖತ್ ಸ್ಟಾರ್ ಡಮ್ ಹೊಂದಿರುವ ಈ ಜೋಡಿಯನ್ನು ತೆರೆ ಮೇಲೆ ಒಟ್ಟಾಗಿ ನೋಡಲು ಪ್ರೇಕ್ಷಕರು ಬಯಸುತ್ತಾರೆ. ಟೈಗರ್ 3 ಸಿನಿಮಾದಲ್ಲಿ ಈ ಇಬ್ಬರೂ ಬಹುಬೇಡಿಕೆ ನಟರು ತೆರೆ ಹಂಚಿಕೊಳ್ಳುತ್ತಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
ಚಿತ್ರ ನಿರ್ಮಾಣದ ಮೂಲಗಳ ಪ್ರಕಾರ, ನಿರ್ಮಾಪಕ ಆದಿತ್ಯ ಚೋಪ್ರಾ ಅವರು "ಟೈಗರ್ 3"ನಲ್ಲಿ ಬೃಹತ್ ಆ್ಯಕ್ಷನ್ ಸೆಟ್ ಅನ್ನು ರಚಿಸಲು ಬರೋಬ್ಬರಿ 35 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಇಬ್ಬರು ಮೆಗಾಸ್ಟಾರ್‌ಗಳನ್ನು ದೊಡ್ಡ ಪರದೆಯ ಮೇಲೆ ಅತ್ಯಂತ ಅದ್ಭುತವಾದ ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಪ್ರದರ್ಶಿಸುವ ಮೂಲಕ ಮರೆಯಲಾಗದ ಸಿನಿಮೀಯ ಅನುಭವವನ್ನು ಸೃಷ್ಟಿಸುವುದು ನಿರ್ಮಾಪಕರ ಗುರಿ. ಈ ಹಿನ್ನೆಲೆ "ಪಠಾಣ್" ಯಶಸ್ಸಿನ ನಂತರ ಚೋಪ್ರಾ ಅವರು "ಟೈಗರ್ 3"ಗೆ ವಿಶೇಷ ಮಹತ್ವ ಕೊಡುತ್ತಿದ್ದಾರೆ. ಈ ಸಿನಿಮಾವನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯಲು ಚಿತ್ರತಂಡ ಪೂರ್ಣ ಶ್ರಮ ಹಾಕಿದತ್ತಿದೆ. ಕೇವಲ ಸೆಟ್ಗೆ 35 ಕೋಟಿ ರೂಪಾಯಿ ವ್ಯಯಿಸುತ್ತಿದ್ದರೆ, ಈ ನಟರ ಸಂಭಾವನೆ ಎಷ್ಟಿರಬಹುದು ಎಂದು ಅಭಿಮಾನಿಗಳು, ಪ್ರೇಕ್ಷಕರು ಅಂದಾಜಿಸುತ್ತಿದ್ದಾರೆ.
"ಟೈಗರ್ 3" ಸಿನಿಮಾ ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್‌ನ ಐದನೇ ಕಂತು. ಇದೇ ದೀಪಾವಳಿಯಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಟೈಗರ್ ಮತ್ತು ಪಠಾಣ್ ಆಪ್ತ ಸ್ನೇಹಿತರಾಗಿದ್ದು, ತಮ್ಮ ಸಿನಿಮಾಗಳಲ್ಲಿ ಪರಸ್ಪರರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಲ್ಮಾನ್ ಅವರು ಎಸ್ಆರ್ಕೆ ಸಿನಿಮಾದಲ್ಲಿ ನಟಿಸಿದ್ದು, ಶಾರುಖ್ ಅವರು ಸಲ್ಲು ಚಿತ್ರದಲ್ಲಿ ನಟಿಸಲು ಸಂಪೂರ್ಣ ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಶಾರುಖ್ 'ಪಠಾಣ್' ದಾಖಲೆ: 1971ರ ನಂತರ ಬಾಂಗ್ಲಾದೇಶದಲ್ಲಿ ತೆರೆಕಾಣಲಿರುವ ಮೊದಲ ಹಿಂದಿ ಚಿತ್ರ
ಟೈಗರ್ 3 ಸಿನಿಮಾದ ಆ್ಯಕ್ಷನ್ ಸೀನ್ ಇಡೀ ಭಾರತೀಯ ಚಿತ್ರರಂಗದಲ್ಲಿ ಚಿತ್ರೀಕರಿಸಲಾಗುವ ಅತ್ಯಂತ ದುಬಾರಿ ಸೀನ್ ಆಗಲಿದೆ ಎಂದು ವದಂತಿಗಳಿವೆ. ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸೀನ್ ನಿರ್ಮಾಣಗೊಂಡಿಲ್ಲ. ಈ ಹಿನ್ನೆಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಸಲ್ಮಾನ್ ಎದುರಾಳಿಯಾಗಿ ಇಮ್ರಾನ್ ಹಶ್ಮಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ವಿರುದ್ಧ ಹೋರಾಡುವ ಐಎಸ್‌ಐ ಏಜೆಂಟ್ ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಈ ಮೊದಲು ತೆರೆಕಂಡಿರುವ ಟೈಗರ್ 1 ಮತ್ತು 2 ಚಿತ್ರದಲ್ಲೂ ಸಲ್ಮಾನ್ ಮತ್ತು ಕತ್ರಿನಾ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಸಿನಿಮಾದಲ್ಲಿ ಡ್ಯಾನ್ಸರ್ ರಾಘವ್ ಜುಯಲ್ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸೋದು ಗ್ಯಾರಂಟಿ!
ಚಿತ್ರೀಕರಣವು ಮುಂಬೈನಲ್ಲಿ ಸುಮಾರು ಹತ್ತರಿಂದ ಹನ್ನೆರಡು ದಿನಗಳು ನಡೆಯುವ ನಿರೀಕ್ಷೆಯಿದೆ. ಇದೇ ಮೇ. 8ರಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ "ಕಿಸಿ ಕಾ ಭಾಯ್ ಕಿಸಿ ಕಿ ಜಾನ್" ಸಲ್ಮಾನ್ ಕೊನೆಯ ಚಿತ್ರ. ಏಪ್ರಿಲ್ 21ರಂದು ತೆರೆಕಂಡ ಈ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಇನ್ನೂ ಪಠಾಣ್ ಯಶಸ್ಸಿನಲ್ಲಿರುವ ಶಾರುಖ್ ಖಾನ್ ಅವರು ರಾಜ್ ಕುಮಾರ್ ಹಿರಾನಿ ಅವರ "ಡಂಕಿ" ಮತ್ತು ಅಟ್ಲೀ ಅವರ "ಜವಾನ್" ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡೂ ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದೆ. ಇದೇ ಸಾಲಿನಲ್ಲಿ ಚಿತ್ರ ತೆರೆಕಾಣಲಿದೆ.