'ಸೈರನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಯುವ ನಟ ಪ್ರವೀರ್ ಶೆಟ್ಟಿ. ಚೊಚ್ಚಲ ಚಿತ್ರದಲ್ಲಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆದ ಇವರು ಸೈಲೆಂಟ್ ಆಗಿ ಎರಡನೇ ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಈ ಚಿತ್ರಕ್ಕೆ 'ಎಂಗೇಜ್ಮೆಂಟ್' ಎಂದು ಟೈಟಲ್ ಇಡಲಾಗಿದೆ. ಸಿನಿಮಾದಲ್ಲಿ ಪ್ರವೀರ್ ಶೆಟ್ಟಿಗೆ ನಾಯಕನಾಗಿ ಐಶ್ವರ್ಯ ಗೌಡ ಅಭಿನಯಿಸಿದ್ದಾರೆ.
ಶೂಟಿಂಗ್ ಮುಕ್ತಾಯ: ಈ ಚಿತ್ರವನ್ನು ರಾಜು ಬೋನಗಾನಿ ನಿರ್ದೇಶನ ಮಾಡಿದ್ದಾರೆ. ಸದ್ದಿಲ್ಲದೇ 'ಎಂಗೇಜ್ಮೆಂಟ್' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಕೊಡಗು, ಮೈಸೂರು, ಗೋವಾ ಮುಂತಾದ ಕಡೆ ನಲವತ್ತು ದಿನಗಳ ಕಾಲ 'ಎಂಗೇಜ್ಮೆಂಟ್' ಚಿತ್ರದ ಚಿತ್ರೀಕರಣ ಮಾಡಲಾಗಿತ್ತು.
ಚಿತ್ರತಂಡ ಹೀಗಿದೆ.. ಇದೊಂದು ಪ್ರೇಮ ಕಥಾಹಂದರ ಹೊಂದಿರುವ ಚಿತ್ರ. 'ಎಂಗೇಜ್ಮೆಂಟ್'ಗೆ ನಿರ್ದೇಶಕ ರಾಜು ಬೋನಗಾನಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ರಾಜು ಬೋನಗಾನಿ ನಿರ್ದೇಶನದ ನಾಲ್ಕನೇ ಚಿತ್ರ. ಈ ಚಿತ್ರದಲ್ಲಿ ಪ್ರವೀರ್ ಶೆಟ್ಟಿ, ಐಶ್ವರ್ಯ ಗೌಡ ಅಲ್ಲದೇ ರಾಜಗೋಪಾಲ್ ಅಯ್ಯರ್, ಬಾಲ ರಾಜವಾಡಿ, ಭಾವನ, ರಜನಿಶ್ರೀ, ಶರದ್ ವರ್ಮ, ದೀಪ್ತಿ ಗುಪ್ತ ಹಾಗೂ ಸುಜಯ್ ರಾಮ್ ಮುಂತಾದವರು ಇದ್ದಾರೆ.
ಇದನ್ನೂ ಓದಿ: ನೂರರ ಹೊಸ್ತಿಲಲ್ಲಿರುವ VISL: ನ. 4, 5 ರಂದು ಶತಮಾನೋತ್ಸವ ಸಂಭ್ರಮ: ನಟ ದೊಡ್ಡಣ್ಣ
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ದಿಲೀಪ್ ಭಂಡಾರಿ ಹಾಗೂ ರಜತ್ ಘೋಶ್ ಸಂಗೀತ ನೀಡಿದ್ದಾರೆ. ವೆಂಕಟ್ ಮನಂ ಛಾಯಾಗ್ರಹಣ, ರವಿ ಕೊಂಡವೀಟಿ ಸಂಕಲನ, ವೆಂಕಟೇಶ್ ಕಲಾ ನಿರ್ದೇಶನ, ಡ್ರ್ಯಾಗನ್ ಪ್ರಕಾಶ್ ಸಾಹಸ ನಿರ್ದೇಶನ ಹಾಗೂ ರಾಜು ಪೈಡೆ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ: ರೋಡಿಯಂ ಎಂಟರ್ಟೈನ್ಮೆಂಟ್ ಅರ್ಪಿಸುವ, ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ 'ಎಂಗೇಜ್ಮೆಂಟ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲಕ್ಷ್ಮೀಕಾಂತ್ ಹಾಗೂ ನಾರಾಯಣಸ್ವಾಮಿ ಈ ಚಿತ್ರದ ಸಹ ನಿರ್ಮಾಪಕರು. ಸದ್ಯ ಶೂಟಿಂಗ್ ಮುಗಿಸಿರುವ 'ಎಂಗೇಜ್ಮೆಂಟ್' ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಸ್ಯಾಂಡಲ್ವುಡ್ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳು ತೆರೆ ಕಂಡಿವೆ. ಹೆಚ್ಚಾಗಿ ಪ್ಯಾನ್ ಇಂಡಿಯಾ ಸಿನಿಮಾಗಳೇ ಇತ್ತೀಚೆಗೆ ನಿರ್ಮಾಣಗೊಳ್ಳುತ್ತಿದೆ. ಹೊಸ ಪ್ರತಿಭೆಗಳು ಕೂಡ ಇದೇ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. 'ಸೈರನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ನಟನಾಗಿ ಗುರುತಿಸಿಕೊಂಡ ಪ್ರವೀರ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಚಿತ್ರ ಬಿಡುಗಡೆಗೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಆದರೆ 'ಎಂಗೇಜ್ಮೆಂಟ್' ಮೇಲೆ ಅಭಿಮಾನಿಗಳಿಗೆ ಕುತೂಹಲವಿದೆ.
ಇದನ್ನೂ ಓದಿ: 'ಕಾವೇರಿ'ದ ಕಿಚ್ಚು: ತಮಿಳು ನಟ ಸಿದ್ಧಾರ್ಥ್ ಬಳಿ ಕ್ಷಮೆಯಾಚಿಸಿದ ಶಿವ ರಾಜ್ಕುಮಾರ್