'ಎಲ್ರ ಕಾಲೆಳಿಯತ್ತೆ ಕಾಲ' ಈ ಡೈಲಾಗ್ ಕೇಳ್ತಿದ್ರೆ ರಿಯಲ್ ಸ್ಟಾರ್ ಉಪೇಂದ್ರ ನೆನಪಾಗ್ತಾರೆ. ಅವರು 'ಉಪ್ಪಿ 2' ಸಿನಿಮಾದಲ್ಲಿ ಎಲ್ರ ಕಾಲೆಳಿಯತ್ತೆ ಕಾಲ ಎಂಬ ಹಾಡಿನ ಮೂಲಕ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದರು. ಈಗ ಇದೇ ಹಾಡಿನ ಸಾಲು ಸಿನಿಮಾ ಟೈಟಲ್ ಆಗಿದೆ. ನಟ ಹಾಗೂ ನಿರ್ದೇಶಕ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಹಾಗೂ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ.
- " class="align-text-top noRightClick twitterSection" data="">
ನಿರ್ದೇಶಕ ಸುಜಯ್ ಶಾಸ್ತ್ರಿ ಮಾತನಾಡಿ, "ಚಿತ್ರೀಕರಣ ಸಂಪೂರ್ಣವಾಗಿದೆ. ಸದ್ಯದಲ್ಲೇ ಮೊದಲ ಪ್ರತಿ ಬರಲಿದೆ. ಚಿತ್ರದ ಮೊದಲ ಹಾಡು (ಗೋಲ್ಡ್ ಫ್ಯಾಕ್ಟರಿ)ಬಿಡುಗಡೆಯಾಗಿದೆ. ಮದುವೆಯ ಆರತಕ್ಷತೆಯ ಹಾಡಿದು. ರಾಜಗುರು ಹೊಸಕೋಟೆ ಸಾಹಿತ್ಯವಿದ್ದು ಗುರುರಾಜ ಹೊಸಕೋಟೆ, ಪ್ರವೀಣ್ -ಪ್ರದೀಪ್ ಹಾಡಿದ್ದಾರೆ. ಇದೊಂದು 80ರ ದಶಕದ ಕಥೆ. ಒಂದು ಘಟನೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ತರಹದ ಪಾತ್ರ ವಹಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ" ಎಂದರು.
"ಕಾಲ ಯಾರನ್ನೂ ಬಿಡುವುದಿಲ್ಲ, ಎಲ್ಲರ ಕಾಲನ್ನೂ ಎಳೆಯುತ್ತದೆ ಎಂದು ಈ ಚಿತ್ರದ ಮೂಲಕ ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಚಂದನ್ ಮತ್ತು ಅರ್ಚನಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಅವರು ನಟಿಸಬಾರದು. ಸಹಜವಾಗಿ ವರ್ತಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಹಾಗಾಗಿ, ವರ್ಕ್ ಶಾಪ್ ಮಾಡಿದೆ. ಇಬ್ಬರೂ ಬಹಳ ಸಹಜವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರ ವಿಭಿನ್ನವಾಗಿ ಮತ್ತು ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ" ಎಂದು ಹೇಳಿದರು.
"ಈ ಹಾಡಿನಲ್ಲಿ ನಾನು ತುಂಬಾ ಸಿಟ್ಟಾಗಿರುತ್ತೇನೆ. ಅದಕ್ಕೊಂದು ಕಾರಣವೂ ಇರುತ್ತದೆ. ಹಾಡು, ಚಿತ್ರ ಎರಡೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ವಿಭಿನ್ನವಾದ ಚಿತ್ರ. ಸುಜಯ್ ಶಾಸ್ತ್ರಿ ಅವರಿಂದ ತುಂಬಾ ಕಲಿತೆ. ಅವರು ನನ್ನನ್ನು ಚೆನ್ನಾಗಿ ಮೌಲ್ಡ್ ಮಾಡಿದ್ದಾರೆ" ಎನ್ನುತ್ತಾರೆ ನಟ ಚಂದನ್ ಶೆಟ್ಟಿ.
ನಟಿ ಅರ್ಚನಾ ಮಾತನಾಡಿ, "ಒಂದು ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಹಳ ಆಸೆ ಇತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ" ಎಂದು ಸಂತಸ ವ್ಯಕ್ತಪಡಿಸಿದರು. ಹಿರಿಯ ಕಲಾವಿದರಾದ ತಾರಾ, ದತ್ತಣ್ಣ, ಮಂಡ್ಯ ರಮೇಶ್, ಮಂಜು ಪಾವಗಡ, ರಜನಿಕಾಂತ್ ತಾರಾಗಣದಲ್ಲಿದ್ದಾರೆ. ಉಷಾ ಗೋವಿಂದರಾಜು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಾಜಗುರು ಹೊಸಕೋಟೆ ಬರೆದಿದ್ದು, ಪ್ರವೀಣ್ -ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಸಂಗೀತ ನಿರ್ದೇಶನದ ಜೊತೆಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ!