ಸಿನಿಮಾ ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾವನ್ನು ಆರಂಭದಿಂದ ಹಿಡಿದು ಅಂತ್ಯದವರೆಗೆ ನೋಡಬೇಕು ಎಂಬ ಕಾರಣಕ್ಕೆ ತಡವಾದಾಗ ಆಟೋ, ಬೈಕ್, ಓಲಾ ಎಂದೆಲ್ಲಾ ಹಿಡಿದು ಬರುವುದು ಸಾಮಾನ್ಯ. ಆದರೆ, ನಮ್ಮ ರಾಜ್ಯದ ಮಂತ್ರಿಯೊಬ್ಬರು ಸಿನಿಮಾಗೆ ಬೇಗ ಹೋಗಲು ಮೆಟ್ರೋ ರೈಲು ಬಳಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು.
ಮಕ್ಕಳು ಮತ್ತು ಪೋಷಕರ ಮೊಬೈಲ್ ಬಳಕೆಯ ಕುರಿತಾದ ಚಿತ್ರ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ದಿನೇ ದಿನೇ ಜನಪ್ರಿಯವಾಗುತ್ತಿದೆ. ಮಧುಚಂದ್ರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ನಟಿಸಿದ್ದಾರೆ.
ಚಿತ್ರ ಸಂಪೂರ್ಣ ಕಾಮಿಡಿಯಾಗಿದ್ದರೂ ಜನರಿಗೆ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಕಳಕಳಿಯ ಕಾರಣಕ್ಕೆ ಸರ್ಕಾರ ಸಿನಿಮಾವನ್ನು ಬೆಂಬಲಿಸುವ ಉದ್ದೇಶದಿಂದ ಸಚಿವ ಬಿ.ಸಿ.ನಾಗೇಶ್ ಕೂಡಾ ಸಿನಿಮಾ ನೋಡಲು ಮಲ್ಲೇಶ್ವರಂ ಮಂತ್ರಿ ಮಾಲ್ಗೆ ಬಂದಿದ್ದರು.
ಸಿನಿಮಾ ವೀಕ್ಷಣೆಯ ಬಳಿಕ ಮಾತನಾಡಿದ ಸಚಿವರು, ಈ ಸಿನಿಮಾವನ್ನು ಮಕ್ಕಳು ತಮ್ಮ ಪೋಷಕರ ಜೊತೆಯಲ್ಲಿ ತಪ್ಪದೇ ನೋಡಿ. ಎಲ್ಲ ಶಾಲಾ ಮಕ್ಕಳಿಗೂ ಸಿನಿಮಾ ನೋಡಲು ಶಿಕ್ಷಕರು ಪ್ರೇರೇಪಿಸುವ ಮೂಲಕ ಅವರ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಲಿ ಎಂದು ಹೇಳಿದರು.