ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು 2ನೇ ಬಾರಿಗೆ ವಿಚಾರಣೆಗೆ ಹಾಜರಾದರು.
200 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಈಗಾಗಲೇ ಜೈಲು ಪಾಲಾಗಿದ್ದಾನೆ. ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೂಡಾ ಕೇಳಿ ಬಂದಿದ್ದು, ತಮ್ಮ ಹೇಳಿಕೆ ದಾಖಲಿಸುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು.
ಏಪ್ರಿಲ್ನಲ್ಲಿ ಇಡಿ ಅಧಿಕಾರಿಗಳು ಜಾಕ್ವೆಲಿನ್ಗೆ ಸೇರಿದ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿ ವಿಚಾರಣೆ ನಡೆಸಿತ್ತು. ಬಳಿಕ ಅಗತ್ಯವಿದ್ದಾಗ ತನಿಖೆಗೆ ಲಭ್ಯವಿರಬೇಕು, ವಿದೇಶಕ್ಕೆ ತೆರಳಬಾರದು ಎಂದು ನಿರ್ಬಂಧ ವಿಧಿಸಿತ್ತು. ಇದಾದ 2 ತಿಂಗಳ ಬಳಿಕ ಇಂದು ನಟಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣವೇನು?: ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಕೇಶ್ ಚಂದ್ರಶೇಖರ್ನನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದಾಗ ನಟಿ ಜಾಕ್ವೆಲಿನ್ ಹಾಗೂ ಸುಕೇಶ್ ಚಂದ್ರಶೇಖರ್ ನಡುವಿನ ಸಂಬಂಧ ಬಯಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಸುಕೇಶ್, ನಟಿ ಜಾಕ್ವೆಲಿನ್ಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದ. ಇದರ ಬೆನ್ನಲ್ಲೇ ಜಾಕ್ವೆಲಿನ್-ಸುಕೇಶ್ ಜೊತೆಗಿನ ಕೆಲವು ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದರ ಜೊತೆಗೆ ಆತ ಜಾಕ್ವೆಲಿನ್ಗಾಗಿ ಮೂರು ಸರಣಿಗಳ 500 ಕೋಟಿ ರೂ. ಬಜೆಟ್ನ ಸೂಪರ್ ಹೀರೋ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದ ಎಂದು ಗೊತ್ತಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ನಟಿ ನೋರಾ ಫತೇಹಿ ಅವರನ್ನೂ ಇಡಿ ವಿಚಾರಣೆಗೊಳಪಡಿಸಿದೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಟ್ರೈಲರ್ ಹಂಚಿಕೊಂಡು ಸಿನಿಮಾ ವೀಕ್ಷಿಸುವಂತೆ ಅಮಿತಾಬ್ ಬಚ್ಚನ್ ಮನವಿ