ಶಾರುಖ್ ಖಾನ್ ಅಭಿನಯದ ಕಾಮಿಡಿ ಡ್ರಾಮಾ 'ಡಂಕಿ' ಹಾಗೂ ಪ್ರಭಾಸ್ ಅಭಿನಯದ ಆ್ಯಕ್ಷನ್ ಎಂಟರ್ಟೈನ್ಮೆಂಟ್ 'ಸಲಾರ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಬಾಕ್ಸ್ ಆಫೀಸ್ ಮಹಾ ಪೈಪೋಟಿಗೆ ವೇದಿಕೆ ಸಜ್ಜಾಗಿದೆ. ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ತೆರೆಕಾಣುತ್ತಿರುವ ಸಲಾರ್ ಮತ್ತು ಡಂಕಿ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎರಡೂ ಸಿನಿಮಾಗಳು ಪ್ರೇಕ್ಷಕರ ಆಸಕ್ತಿ ಹೆಚ್ಚಿಸಿದೆ. ಸಿನಿಮಾ ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಅಡ್ವಾನ್ಸ್ ಟಿಕೆಟ್ ಸೇಲ್ ವ್ಯವಹಾರದಲ್ಲಿ 'ಡಂಕಿ'ಯನ್ನು ಮೀರಿಸಿದೆ.
ಪ್ರೇಕ್ಷಕರ ಮೊದಲ ಆದ್ಯತೆ 'ಸಲಾರ್' ಎಂದು ತೋರುತ್ತಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅಭಿನಯದ ಡಂಕಿ ಸಿನಿಮಾ ಮೀರಿಸುವ ಸಾಧ್ಯತೆಗಳು ಹೆಚ್ಚಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಈಗಾಗಲೇ 12.85 ಕೋಟಿ ರೂಪಾಯಿಗಳ ವ್ಯವಹಾರ (ಮೊದಲ ದಿನದ ಕಲೆಕ್ಷನ್) ನಡೆಸಿದೆ. ದೇಶಾದ್ಯಂತ 6,439 ಶೋಗಳಿಗೆ 5,77,406 ಟಿಕೆಟ್‌ಗಳನ್ನು ಈಗಾಗಲೇ ಮಾರಾಟ ಮಾಡಿದೆ.
ಮತ್ತೊಂದೆಡೆ ಡಂಕಿ ಸಿನಿಮಾ 12,612 ಶೋಗಳಲ್ಲಿ 3,62,027 ಟಿಕೆಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 10.3 ಕೋಟಿ ರೂ.ನ ಬ್ಯುಸಿನೆಸ್ ನಡೆದಿದೆ. ಮಂಗಳವಾರದವರೆಗೆ ಡಂಕಿ ಮುನ್ನಡೆ ಸಾಧಿಸಿತ್ತು. ಆದ್ರೀಗ ಸಲಾರ್ ಮುಂದಿದೆ. ಈ ಅಂಕಿ ಅಂಶ ಕ್ಷಣ ಕ್ಷಣಕ್ಕೂ ಏರುತ್ತಿದ್ದು, ಮೊದಲ ದಿನದ ಕಲೆಕ್ಷನ್ ನಂಬರ್ ಬಂದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
ತೆಲುಗು ರಾಜ್ಯಗಳಲ್ಲಿ ಸಲಾರ್ ಬಗ್ಗೆ ಅಪಾ ಉತ್ಸಾಹ ವ್ಯಕ್ತವಾಗಿದೆ. ತೆಲುಗು ಆವೃತ್ತಿ ವೀಕ್ಷಿಸಲು 3,90,930 ಟಿಕೆಟ್ ಮಾರಾಟವಾಗಿದ್ದು, 8.95 ಕೋಟಿ ರೂ. ವ್ಯವಹಾರ ನಡೆದಿದೆ. ಹಿಂದಿ ಆವೃತ್ತಿಯಲ್ಲಿ 1.75 ಕೋಟಿ ರೂ.ನ ವ್ಯವಹಾರ ನಡೆದಿದೆ. ಮಲಯಾಳಂ ಪ್ರದೇಶದಲ್ಲೂ ಸಲಾರ್ ಮೇಲಿನ ಕುತೂಹಲ ಹೆಚ್ಚಿದಂತೆ ತೋರುತ್ತಿದೆ. 978 ಪ್ರದರ್ಶನಗಳಿಗೆ 87,301 ಟಿಕೆಟ್‌ಗಳು ಮಾರಾಟವಾಗಿದ್ದು, 1.28 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ.
ಇದನ್ನೂ ಓದಿ: ಹೆಚ್ಚಾಯ್ತು 'ಸಲಾರ್' ಫೀವರ್: ಮಧ್ಯರಾತ್ರಿಯು ಶೋ , ಟಿಕೆಟ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ತೆಲಂಗಾಣ ಸರ್ಕಾರ
ವರ್ಷಾರಂಭದಲ್ಲಿ ಪಠಾಣ್, ಬಳಿಕ ಜವಾನ್‌ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿರುವ ಶಾರುಖ್ ಖಾನ್ ಡಂಕಿಯೊಂದಿಗೆ 2023ನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. ಮುಂಗಡ ಬುಕಿಂಗ್ ಟ್ರೆಂಡ್ ಗಮನಿಸಿದರೆ, ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಮೊದಲ ದಿನದ ಗಳಿಕೆಗೆ ಈ ರಾಜ್ಯದಿಂದ 1.82 ಕೋಟಿ ರೂ. ಬರಲಿದೆ. ಉಳಿದಂತೆ ದೆಹಲಿಯಿಂದ 1.56 ಕೋಟಿ ರೂ., ಪಶ್ಚಿಮ ಬಂಗಾಳದಿಂದ 1.23 ಕೋಟಿ ರೂ. ಬರಲಿದೆ. ಈ ಅಂಕಿ - ಅಂಶಗಳು ಏರುತ್ತಿದೆ. ಎಸ್‌ಆರ್‌ಕೆ ಡಂಕಿ ಮೂಲಕ ಹ್ಯಾಟ್ರಿಕ್ ಹಿಟ್ ಸಾಧಿಸುತ್ತಾರೆಯೇ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ: ಎಂಬಿಬಿಎಸ್ ಪರೀಕ್ಷೆಗೆ ತಯಾರಿ: ಸಿನಿಮಾಗಳಿಂದ ನಟಿ ಶ್ರೀಲೀಲಾ ತಾತ್ಕಾಲಿಕ ಬ್ರೇಕ್?