ಗುಲ್ಟು ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟ ನವೀನ್ ಶಂಕರ್ ಸದ್ಯ ಮಾಸ್ ಟೈಟಲ್ ಹೊಂದಿರುವ ಹೊಸ ಸಿನಿಮಾದೊಂದಿಗೆ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ. ಚಿತ್ರಕ್ಕೆ ಕ್ಷೇತ್ರಪತಿ ಎಂದು ಟೈಟಲ್ ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಅನ್ನು ನಟ ಡಾಲಿ ಧನಂಜಯ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಿರ್ದೇಶಕ ಸಿಂಪಲ್ ಸುನಿ ಉಪಸ್ಥಿತರಿದ್ದರು.
ಡಾಲಿ ಧನಂಜಯ್ ಮಾತನಾಡಿ, ಯಾವುದೇ ಬ್ಯಾಗ್ರೌಂಡ್ ಇಲ್ಲದೇ ನವೀನ್ ಈ ಮಟ್ಟಕ್ಕೆ ಬೆಳದಿರುವುದು ನಿಜಕ್ಕೂ ಹೆಮ್ಮೆ. ಚಿತ್ರದಲ್ಲಿ ನವೀನ್ ಬಸವ ಎಂಬ ಪಾತ್ರ ಮಾಡಿದ್ದಾರೆ. ಬಸವನಿಗೆ ಬಸವಣ್ಣನವರು ಆದರ್ಶವಾಗಲಿ. ಚಿತ್ರ ಜಯಭೇರಿ ಬಾರಿಸಲಿ ಎಂದರು.
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನವೀನ್ ನನಗೆ ಬಹಳ ದಿನಗಳಿಂದ ಪರಿಚಯ. ಎಲ್ಲಾ ಕೆಲಸಗಳಿಗೆ ದೇವರ ಆಶೀರ್ವಾದ ಬೇಕು. ಕೆಲವೊಮ್ಮೆ ರಾಕ್ಷಸರ ಆಶೀರ್ವಾದವೂ ಬೇಕಾಗುತ್ತದೆ. ಹಾಗಾಗಿ ನಮ್ಮ ನಟ ರಾಕ್ಷಸ ಡಾಲಿ ಧನಂಜಯ್ ಬಂದಿದ್ದಾರೆ. ಅವರ ಆಶೀರ್ವಾದ ಚಿತ್ರತಂಡಕ್ಕೆ ಇರಲಿ ಎಂದರು.
ನಟ ನವೀನ್ ಶಂಕರ್ ಮಾತನಾಡಿ, ನಾನು ಬಸವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಬಸವ ಇಂಜಿನಿಯರಿಂಗ್ ವಿದ್ಯಾರ್ಥಿ. ತನ್ನಿಷ್ಟಕ್ಕೆ ತಾನು ಇರುವಾತ. ಆತನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರ ಮೂಲಕ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಬಸವ ನನ್ನೊಳಗೆ, ನಿಮ್ಮೊಳಗೆ ಇದ್ದಾನೆ. ಕೆಲವರಿಗೆ ಅವನು ಜೀವಂತ. ಇನ್ನೂ ಕೆಲವರಿಗೆ ಆತ ಇಲ್ಲ. ಚಿತ್ರ ನೋಡಿದ ಮೇಲೆ ಅದರ ಬಗ್ಗೆ ತಿಳಿಯುತ್ತದೆ ಎಂದು ಕಥೆಯ ಬಗ್ಗೆ ವಿವರಿಸಿದ ನವೀನ್ ಶಂಕರ್, ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಆನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದೆ ಎಂದರು.
ಇದನ್ನೂ ಓದಿ: ಹೆಚ್‌ಎಂಟಿ ಕಾಡಿನಲ್ಲಿ 'ಬಾಂಡ್ ರವಿ' ಸಾಹಸ ದೃಶ್ಯಗಳ ಚಿತ್ರೀಕರಣ
ಕ್ಷೇತ್ರಪತಿ ಸಿನಿಮಾ ನಿರ್ದೇಶಕ ಶ್ರೀಕಾಂತ್ ಕಟಗಿ ಮಾತನಾಡಿ, ನಾನು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಗುಲ್ಟು ಸಿನಿಮಾ ನೋಡಿ ಅಭಿಮಾನಿಯಾದೆ. ನಾನು ಯಾರ ಬಳಿಯೂ ಸಹ ನಿರ್ದೇಶಕನಾಗಿ ಕೆಲಸ ಮಾಡಿಲ್ಲ. ಇದು ಮೊದಲ ಚಿತ್ರ. ರೈತನಿಗೆ ಸಂಸ್ಕೃತದಲ್ಲಿ 21 ಹೆಸರುಗಳಿದೆ. ಅದರಲ್ಲಿ ಕ್ಷೇತ್ರಪತಿ ಸಹ ಒಂದು. ರೈತನನ್ನು ಕ್ಷೇತ್ರಪತಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಇದೊಂದು ಅಪ್ಪ-ಮಗನ ಬಾಂಧವ್ಯದ ಚಿತ್ರವೂ ಹೌದು. ಗದಗಿನ ತಿಮ್ಮಾಪುರ ಎಂಬ ಊರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ ಎಂದರು.
ಚಿತ್ರದಲ್ಲಿ ರಾಹುಲ್ ಐನಾಪುರ ಕೂಡ ಅಭಿನಯಿಸಿದ್ದು, ಪ್ರವೀಣಾ ಕುಲಕರ್ಣಿ ಬಂಡವಾಳ ಹಾಕಿದ್ದಾರೆ. ಮನಸ್ಸಿನ ಭಾವನೆಗಳು ಸಿಡಿದಾಗ ಆ ಒಬ್ಬ ಪ್ರತಿಯೊಬ್ಬನ ಪ್ರತೀಕವಾಗುತ್ತಾನೆ. ಆತನೇ ಕ್ಷೇತ್ರಪತಿ ಎಂಬುದು ಫಸ್ಟ್ ಲುಕ್ನಲ್ಲಿ ಕಾಣಬಹುದು.