ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಒಂದು ವರ್ಷ ಕಳೆದಿದೆ. ಅವರ ಹೆಸರಿನಲ್ಲಿ ಸಮಾಜ ಸೇವೆ ಮುಂದುವರಿದಿದೆ. ಪುನೀತ್ ರಾಜ್‍ಕುಮಾರ್ ಬದುಕಿದ್ದಾಗ ಮಾಡಿರೋ ಸಾಮಾಜಿಕ ಕೆಲಸಗಳು ಬೆಳಕಿಗೆ ಬರುತ್ತಿದೆ.
ಕಳೆದ ವರ್ಷ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ನವಂಬರ್ ತಿಂಗಳಲ್ಲಿ ಅಪ್ಪು ಅಮರ ಕಾರ್ಯಕ್ರಮದ ಮೂಲಕ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದು ನಿಮಗೆಲ್ಲ ತಿಳಿದಿರುವ ವಿಷಯ. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಕಾವೇರಿ ಆಸ್ಪತ್ರೆಯು, ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ಸಹಯೋಗದಲ್ಲಿ ಕೆಟಿವಿಎ ಸದಸ್ಯರಿಗೆ ಅಪ್ಪು ಅಮರ ಹೆಲ್ತ್ ಪ್ರಿವಿಲೇಜ್ ಕಾರ್ಡ್ ವಿತರಿಸುವ ಭರವಸೆ ನೀಡಿತ್ತು.
ಅದರಂತೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಅಪ್ಪು ಅಮರ ಹೆಲ್ತ್ ಪ್ರಿವೀಲೇಜ್ ಕಾರ್ಡ್ ವಿತರಿಸಲಿದೆ. ಈ ಕಾರ್ಡ್ ಪಡೆದ ಸದಸ್ಯರಲ್ಲಿ ಅವಶ್ಯಕತೆ ಇರುವ ಹಾಗೂ ಆರ್ಥಿಕವಾಗಿ ದುರ್ಬಲರಾದ ಸದಸ್ಯರಿಗೆ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲು ಕಾವೇರಿ ಆಸ್ಪತ್ರೆ ಮತ್ತು ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ನಿರ್ಧರಿಸಿದೆ.
ಇದಲ್ಲದೇ ಈ ಹೆಲ್ತ್ ಕಾರ್ಡ್ ಅಡಿಯಲ್ಲಿ ಎಲ್ಲಾ ಸ್ಪೆಷಾಲಿಟಿ ಸವಲತ್ತುಗಳನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದು. ಈ ಸವಲತ್ತನ್ನು ಸುಮಾರು 5000 ಸದಸ್ಯರು ಮತ್ತು ಅವರ ಕುಟುಂಬದವರು ಪಡೆಯಲಿದ್ದಾರೆ.
ಇದನ್ನೂ ಓದಿ: ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್ ರಾಜ್‍ಕುಮಾರ್.. ಅಪ್ಪು ಕಾಂತಾರ ಫೋಟೋ ವೈರಲ್
ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್ ವಿ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಇದೇ 13 ರಂದು ಭಾನುವಾರ ಸಂಜೆ ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ಯಡಿಯೂರಿನಲ್ಲಿ ಐದು ಗಂಟೆಗೆ ಕಾರ್ಯಕ್ರಮ ನಡೆಯಲಿದೆ.