ಬ್ರಹ್ಮ, ಐಲವ್ಯೂ ಸಿನಿಮಾ ಬಳಿಕ ನಟ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರ 'ಕಬ್ಜ'. ಇದರ ಸೂತ್ರಧಾರ ಹಾಗೂ ನಿರ್ಮಾಪಕ ಆರ್.ಚಂದ್ರು ಸಿನಿಮಾದ ಲೇಟೆಸ್ಟ್ ಅಪ್ಡೇಟ್ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಚಿತ್ರೀಕರಣ ಆಗುತ್ತಿರುವ ಬಹು ಕೋಟಿ ವೆಚ್ಚದ ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೆಲ ದಿನಗಳ ಹಿಂದೆ ಮಂಗಳೂರಿನ ಬೀಚ್ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮಾಡಿಕೊಂಡು ಬರಲಾಗಿದೆ.
'ನನಗೂ ಕೂಡ ಕಳೆದ ಮೂರು ವರ್ಷದಿಂದ ಒಂದು ರೀತಿಯ ತಪಸ್ಸು ಮಾಡಿದ ಅನುಭವ ಆಗಿದೆ. ಟೀಸರ್ ರಿಲೀಸ್ ಯಾವಾಗ? ಟ್ರೈಲರ್ ಬಿಡುಗಡೆ ಯಾವಾಗ? ಎಂಬೆಲ್ಲ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ವರ್ಷದಲ್ಲೇ 'ಕಬ್ಜ' ಬಿಡುಗಡೆ ಪಕ್ಕಾ. ಆದರೆ, ಟೀಸರ್ ಬಿಡುಗಡೆ ಸಂದರ್ಭದಲ್ಲಿ ಅಧಿಕೃತವಾಗಿ ಚಿತ್ರದ ಬಿಡುಗಡೆ ಬಗ್ಗೆ ಘೋಷಣೆ ಮಾಡಲಾಗುತ್ತದೆ. ಉಪ್ಪಿ ಸಾರ್ ಹಾಗೂ ಸುದೀಪ್ ಸಾರ್ ನಡುವಿನ ಸಣ್ಣ ಟಾಕೀ ಭಾಗ ಮಾತ್ರ ಬಾಕಿ ಇದೆ. ಕೋವಿಡ್ ಏನೇ ಸಮಸ್ಯೆ ಇದ್ದರೂ, ಏಳು ಭಾಷೆಯಲ್ಲಿ ಸಿನಿಮಾ ರೆಡಿಯಾಗುತ್ತಿದೆ' ಎಂದು ನಿರ್ದೇಶಕ ಆರ್. ಚಂದ್ರು ತಿಳಿಸಿದರು.
ಸಿನಿಮಾ ಸ್ಟಾರ್ಟ್ ಆಗುವುದಕ್ಕಿಂತ ಮುಂಚೆ ಬಾಲಿವುಡ್ ಕೆಲ ಪ್ರತಿಷ್ಠಿತ ಪ್ರೊಡಕ್ಷನ್ ಸಂಸ್ಥೆಗಳ ಜೊತೆ ಕನ್ನಡ ಸಿನಿಮಾ ಮಾರ್ಕೆಟಿಂಗ್ ಬಗ್ಗೆ ತಿಳಿದುಕೊಂಡೆ. ಸಿನಿಮಾದ ಕ್ವಾಲಿಟಿ ಹೇಗಿರಬೇಕು, ಎಲ್ಲ ಭಾಷೆಗೂ ಸಿನಿಮಾ ಇಷ್ಟ ಆಗಬೇಕಾದ್ರೆ ಏನೆಲ್ಲಾ ಎಲಿಮೆಂಟ್ಸ್ ಇರಬೇಕು ಅನ್ನೋದನ್ನು ತೀಳಿದುಕೊಂಡೇ ಸಿನಿಮಾವನ್ನು ಏಳು ಭಾಷೆಯಲ್ಲಿ ಅನೌಂಸ್ ಮಾಡುವ ನಿರ್ಧಾರ ಮಾಡಿದ್ದೇನೆ ಎಂದರು.
ಸಿನಿಮಾ 80ರ ದಶಕದ ಅಂಡರ್ ವರ್ಲ್ಡ್ ಕಥೆ ಆಧರಿಸಿದೆ. ಉಪೇಂದ್ರ ಹಾಗೂ ಸುದೀಪ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಶ್ರೇಯಾ ಶರಣ್ ಹೀರೋಯಿನ್ ಆಗಿದ್ದಾರೆ. ಮತ್ತೊಬ್ಬ ಬಾಲಿವುಡ್ ನಟಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಂದ್ರು ತಿಳಿಸಿದರು.
ಇದನ್ನೂ ಓದಿ: ದರ್ಶನ್ ಜತೆ ₹1,500 ಸಾವಿರ ಕೋಟಿ ಕಲೆಕ್ಷನ್ ಮಾಡುವ ಸಿನಿಮಾ ಮಾಡುತ್ತೇನೆ : ರಾಜೇಂದ್ರಸಿಂಗ್ ಬಾಬು