ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಶಸ್ಸು ಕಾಣಬೇಕೆಂಬ ಕನಸಿನೊಂದಿಗೆ ಹೊಸ ಪ್ರತಿಭೆಗಳು ಬರುತ್ತಿರುತ್ತಾರೆ. ಆ ಪೈಕಿ ಕೆಲವರು ಸಕ್ಸಸ್ ಆಗಿ ತಮ್ಮ ವೃತ್ತಿ ಜೀವನವನ್ನು ಇದೇ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆ. ಇದೀಗ ಹೊಸಬರ ತಂಡವೊಂದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ಹೊಟ್ಟೆಪಾಡು ಎಂಬ ಟೈಟಲ್ನೊಂದಿಗೆ ಗಾಂಧಿನಗರಕ್ಕೆ ಪದಾರ್ಪಣೆ ಮಾಡಿದೆ. ವಸಂತ್ ಅಭಿನಯದ ಜೊತೆಗೆ ನಿರ್ದೇಶನ ಮಾಡಿರೋ ಹೊಟ್ಟೆಪಾಡು ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ಸಾಥ್ ಸಿಕ್ಕಿದೆ.
ಹೊಟ್ಟೆಪಾಡು ಸಿನಿಮಾದ ಧ್ವನಿಸುರುಳಿ: ಬಹುತೇಕ ಚಿತ್ರೀಕರಣ ಮುಗಿಸಿರೋ ಹೊಟ್ಟೆಪಾಡು ಸಿನಿಮಾದ ಧ್ವನಿಸುರುಳಿಯನ್ನು ಇತ್ತೀಚೆಗೆ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆ ಮಾಡಿದರು. ಈ ಹೊಸ ಪ್ರತಿಭೆಗಳ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ. ಓಂ ಸಾಯಿ ಪ್ರಕಾಶ್ ಜೊತೆಗೆ ಬಾಲಾಜಿ ಸಿಂಗ್, ಅಡಮಾರನಹಳ್ಳಿ ರಾಜಕೀಯ ಮುಖಂಡರಾದ ರಾಜಣ್ಣ ಹಾಗೂ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಅವರು ಈ ಚಿತ್ರತಂಡಕ್ಕೆ ಸಾಥ್ ನೀಡಿದರು.
'ಹೊಟ್ಟೆಪಾಡು': ಪ್ರತಿದಿನ ಹಸಿವು ನೀಗಿಸಿಕೊಳ್ಳಲು ಏನಾದರು ಕೆಲಸ ಮಾಡೋ ಪ್ರಕ್ರಿಯೆಗೆ ಸಹಜವಾಗಿ ಹೊಟ್ಟೆಪಾಡು ಎಂದು ಕರೆಯುತ್ತೇವೆ. ಈ ವಿಭಿನ್ನ ಟೈಟಲ್ ಇರುವ ಸಿನಿಮಾವನ್ನು ಯುವ ನಟ ವಸಂತ್ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥೆ ಹೊಂದಿರುವ ಸಾಹಸಮಯ ಹಾಗೂ ಸಾಂಸಾರಿಕ ಚಿತ್ರಕ್ಕೆ ವಿಭಿನ್ನವಾಗಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಮೊದಲಿಗೆ ಮಾತನಾಡಿದ ನಟ ಹಾಗು ನಿರ್ದೇಶಕ ವಸಂತ್ ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆಗಿನಿಂದಲೂ ನಾಯಕನಾಗುವ ಆಸೆ. ಆದರೆ ಆಗಿರಲಿಲ್ಲ. ಕೆಲ ವರ್ಷ ಬೇರೆ ವ್ಯಾಪಾರ ಮಾಡುತ್ತಿದೆ. ಈಗ ಹೊಟ್ಟೆಪಾಡು ಚಿತ್ರ ನಿರ್ಮಾಣ, ನಿರ್ದೇಶನದ ಜೊತೆಗ ಸಂಗೀತ ನೀಡಿದ್ದೇನೆ. ಇದು ಹಳ್ಳಿಯಲ್ಲಿ ನಡೆಯುವ ಸಾಂಸಾರಿಕ ಚಿತ್ರ. ಈ ಚಿತ್ರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಾಹ್ನವಿ ವಿಶ್ವನಾಥ್ ವಸಂತ್ ಜೋಡಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್ಜೆ
ವಸಂತ್ ಹಾಗು ಜಾಹ್ನವಿ ವಿಶ್ವನಾಥ್ ಅಲ್ಲದೇ ಶೋಭಾರಾಜ್, ವಿನಯ ಪ್ರಸಾದ್ ಅಪೂರ್ವ, ಶೈಲೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ. ತನ್ಮಯ್ ಎಸ್ ಆನಂದಕುಮಾರ್ ಚಿತ್ರಕಥೆ, ಸಂಭಾಷಣೆ, ನೃತ್ಯ ಹಾಗೂ ಸಹಕಾರ ನಿರ್ದೇಶನವಿರುವ ಈ ಚಿತ್ರಕ್ಕೆ ರವಿ ಬೆಳಗುಂದಿ ಛಾಯಾಗ್ರಹಣ ಹಾಗೂ ಅಮಿತ್ ಜವಳಪುರ ಅವರ ಸಂಕಲನವಿದೆ. ವಸಂತ್ ಅಭಿನಯಿಸಿ, ನಿರ್ದೇಶನ ಜೊತೆಗೆ ಸಂಗೀತ ನೀಡಿರುವ ಹೊಟ್ಟೆಪಾಡು ಚಿತ್ರವನ್ನು ನಿರ್ಮಾಪಕಿ ಡಿ.ವಿ. ರಾಧ ನಿರ್ಮಾಣ ಮಾಡಿದ್ದಾರೆ. ಕೌರವ ವೆಂಕಟೇಶ್ ಈ ಸಿನಿಮಾಗೆ ಆ್ಯಕ್ಷನ್ ಸಿಕ್ವೇನ್ಸ್ ಕಂಪೋಸ್ ಮಾಡಿದ್ದಾರೆ. ಸದ್ಯ ಹಾಡುಗಳನ್ನು ಬಿಡುಗಡೆ ಮಾಡಿರುವ ಹೊಟ್ಟೆಪಾಡು ಚಿತ್ರತಂಡ ಕೆಲ ದಿನಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಿ ಪ್ರೇಕ್ಷಕರ ಮುಂದೆ ಬರಲು ರೆಡಿ ಆಗಿದೆ.
ಇದನ್ನೂ ಓದಿ: ತೆಲುಗಿನ 'ವೇದ' ರಿಲೀಸ್: ಶಿವಣ್ಣನ ಮುಂದಿನ ಸಿನಿಮಾ ಯಾವುದು? ಭಕ್ತಿ ಪ್ರಧಾನ ಚಿತ್ರದತ್ತ ಹ್ಯಾಟ್ರಿಕ್ ಹೀರೋ ಚಿತ್ತ