ಸಿನಿಮಾ ಎಂಬ ಗ್ಲ್ಯಾಮರ್ ಲೋಕದಲ್ಲಿ ಯಾರು ಯಾವಾಗ ಏನು ಬೇಕಾದರೂ ಆಗಬಹುದು. 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿ, ಸೀಯು, ಫ್ಲಾಪ್ ಡೈರೆಕ್ಟರ್, ಕರ್ತ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕ ದುರ್ಗಾ ಪಿ.ಎಸ್.ಕರ್ತ ಚಿತ್ರದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೊಂದು ವಿಭಿನ್ನ ಕಥೆಯ ಸಿನಿಮಾದೊಂದಿಗೆ ಮತ್ತೆ ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಯುವ ಪ್ರತಿಭೆ ಲಿಂಗಾಯತ್ ಹಾಗೂ ನಟಿ ಸ್ನೇಹ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾಗೆ 'ದಿಗ್ವಿಜಯ' ಎಂದು ಟೈಟಲ್ ಇಡಲಾಗಿದೆ. ಒಬ್ಬ ವರದಿಗಾರ ಮನಸ್ಸು ಮಾಡಿದರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ ಬಗೆಹರಿಸಬಹುದು ಎಂದು ಚಿತ್ರದಲ್ಲಿ ಹೇಳಲಾಗಿದೆ. ವರದಿಗಾರನೊಬ್ಬ ಕೇವಲ ಮೂರು ದಿನದಲ್ಲಿ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಿಸುತ್ತಾನೆ. ನಾಯಕನ ತಂದೆ ತಾಯಿ ರೈತರಾಗಿದ್ದು, ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ- ತಾಯಿ ವಿಷ ಸೇವಿಸಿದ ಶಾಕ್ನಿಂದ ನಾಯಕನ ಗೆಳೆಯ ಹುಚ್ಚನಾಗಿರುತ್ತಾನೆ. ಇದು ಚಿತ್ರದ ಕಥಾ ಹಂದರ.
![Actress Sneha and actor Lingayat](https://etvbharatimages.akamaized.net/etvbharat/prod-images/18580093_thumws.jpg)
ಬಹುತೇಕ ಚಿತ್ರೀಕರಣ ಮುಗಿಸಿರೋ ದಿಗ್ವಿಜಯಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದ ಯು ಸರ್ಟಿಫಿಕೇಟ್ ಸಿಕ್ಕಿದೆ. ಗೋವಾ ಫಿಲಂ ಫೆಸ್ಟಿವಲ್ನಲ್ಲಿ 2 ಅವಾರ್ಡ್ ಬಂದಿದೆ. ದುರ್ಗಾ ಪಿ.ಎಸ್. ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಕಲನ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಲಿಂಗಾಯತ್, ಸ್ನೇಹ ಅಲ್ಲದೇ ಜಯಪ್ರಭು ಚಿತ್ರದ ಮತ್ತೊಬ್ಬ ನಾಯಕ. ಇವರೊಂದಿಗೆ ಸುಚೇಂದ್ರ ಪ್ರಸಾದ್, ಪಟ್ರೆ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಹೊನ್ನವಳ್ಳಿ ಶ್ರೀಕಾಂತ್, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರಿಕರಣ ಮಾಡಲಾಗಿದೆ. 4 ಫೈಟ್ ಹಾಗೂ 5 ಹಾಡುಗಳಿವೆ. ಹರ್ಷ ಸಂಗೀತ ನೀಡಿದ್ದಾರೆ. ಡ್ಯಾನ್ಸ್ ಮಾಸ್ಟರ್ ಜಗ್ಗು, ವಿನಸ್ ಮೂರ್ತಿ ಛಾಯಾಗ್ರಹಣ, ಸೂಪ್ಪರ್ ಸುಬ್ಬು ಸಾಹಸವಿದೆ. ಜೆ.ಪಿ.ಎಂಟರ್‌ಟೈನ್ಮೆಂಟ್ ಅಡಿ ಜಯಪ್ರಭು ಆರ್. ಲಿಂಗಾಯತ್, ಅರುಣ್ ಸುಕದರ್, ಹರೀಶ್ ಆರ್.ಸಿ.ನಿರ್ಮಾಣ ಮಾಡಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
![Actress Sneha and actor Lingayat](https://etvbharatimages.akamaized.net/etvbharat/prod-images/18580093_thumwsb.jpg)
ಸೆನ್ಸಾರ್ ಮಂಡಳಿ ನೀಡುವ ಸರ್ಟಿಫಿಕೇಟ್ಗಳ ಮಹತ್ವ: ಒಂದು ಚಿತ್ರ ಸಿದ್ದವಾದ ಮೇಲೆ ಅದನ್ನು ಎಂತಹ ಪ್ರೇಕ್ಷಕರು ನೋಡಬೇಕು, ಎಷ್ಟು ವಯೋಮಾನದ ಮಕ್ಕಳು ನೋಡಬೇಕು ಹಾಗೂ ಯಾರು ನೋಡಬಾರದು ಎಂದು ತಿಳಿದುಕೊಳ್ಳಲು ದೊಡ್ಡದಾಗಿ ಕೆಲವು ಇಂಗ್ಲಿಷ್ ಅಕ್ಷರಗಳನ್ನು ಈ ಸರ್ಟಿಫಿಕೇಟ್ ನೀಡಲಾಗುತ್ತದೆ. ಮಂಡಳಿ 4 ಬಗೆಯ ಸರ್ಟಿಫಿಕೇಟ್ ನೀಡುತ್ತದೆ. ಅವುಗಳು ಹೀಗಿವೆ..
- U ಸರ್ಟಿಫಿಕೇಟ್: ಒಂದು ಸಿನಿಮಾ ಪ್ರಮಾಣ ಪತ್ರದಲ್ಲಿ 'ಯು' ಎಂದು ಬರೆದರೆ, ಎಲ್ಲ ವಯೋಮಾನದ ಜನರಿಗೆ ಈ ಚಲನಚಿತ್ರವನ್ನು ವೀಕ್ಷಿಸಲು ಅನುಮತಿ ನೀಡಲಾಗಿದೆ ಎಂದರ್ಥ.
- U/A ಸರ್ಟಿಫಿಕೇಟ್: ಪ್ರಮಾಣ ಪತ್ರದಲ್ಲಿ 'ಯು/ಎ' ಎಂದು ಬರೆದರೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅವರ ಪೋಷಕರೊಂದಿಗೆ ಮಾತ್ರ ನೋಡಬಹುದು ಎಂದರ್ಥ.
- S ಸರ್ಟಿಫಿಕೇಟ್: ಚಿತ್ರದ ಸರ್ಟಿಫಿಕೇಟ್ ಮೇಲೆ 'ಎಸ್' ಎಂದು ಬರೆದರೆ ಈ ಚಿತ್ರವನ್ನು ಒಂದು ನಿರ್ದಿಷ್ಟ ಪ್ರೇಕ್ಷಕರಿಗಾಗಿ ಮಾಡಲಾಗಿದೆ ಎಂದರ್ಥ. ಉದಾಹರಣೆ ವೈದ್ಯರು, ವಿಜ್ಞಾನಿಗಳಿಗಾಗಿ ನಿರ್ಮಾಣ ಮಾಡಲಾಗಿರುತ್ತದೆ.
- A ಸರ್ಟಿಫಿಕೇಟ್: ಇದು ವಯಸ್ಕರಿಗಾಗಿ ಮಾತ್ರ ಎಂದರ್ಥ.
ಇದನ್ನೂ ಓದಿ: ಐಐಎಫ್‌ಎ ಪ್ರಶಸ್ತಿ: ವಿದೇಶಕ್ಕೆ ತೆರಳಲು ಜಾಕ್ವೆಲಿನ್‌ಗೆ ಕೋರ್ಟ್ ಅನುಮತಿ