ಕನ್ನಡ ಚಿತ್ರರಂಗದಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿರುವ ಪ್ರಶಾಂತ್ ರಾಜಪ್ಪ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ವಿಕ್ಟರಿ, ಅಧ್ಯಕ್ಷ, ರನ್ನ, ಪೊಗರು, ಹೊಂದಿಸಿ ಬರೆಯಿರಿ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದು, ತನ್ನದೇ ವಿಶೇಷ ಐಡೆಂಟಿಟಿ ಹೊಂದಿದ್ದರು. ಅಷ್ಟೇ ಅಲ್ಲ, ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿರುವ ಅನುಭವ ಇವರಿಗಿದೆ. ಇದೀಗ ಸಿನಿಮಾ ರಂಗದ ಕೆಲಸಗಳ ಅನುಭವ ಇಟ್ಟುಕೊಂಡು ನಿರ್ದೇಶಕನಾಗಿ ಚಂದನವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ ಪ್ರಶಾಂತ್ ರಾಜಪ್ಪ.
ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸು. ಆ ಕನಸೀಗ ನನಸಾಗುವ ಹಂತಕ್ಕೆ ಬಂದಿದೆ. ಸಿನಿಮಾ ಬರಹಗಾರನಾಗಿ, ನಿರ್ದೇಶಕರಾದ ಗುರು ಪ್ರಸಾದ್, ಪಿ.ಸಿ. ಶೇಖರ್, ಹೆಚ್.ಪಿ. ದಾಸ್ ಜೊತೆ ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರಕ್ಕೆ ಧಾರೆ ಎರೆಯಲಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುವುದರ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ ಪ್ರಶಾಂತ್ ರಾಜಪ್ಪ.
ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅವರು ಪ್ರಶಾಂತ್ ರಾಜಪ್ಪ ಅವರ ಮೊದಲ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾಮಿಡಿ, ಎಮೋಷನಲ್ ಸಿನಿಮಾ ಇದಾಗಿದ್ದು, ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಶೀಘ್ರದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲವನ್ನೂ ರಿವೀಲ್ ಮಾಡೋದಾಗಿ ಪ್ರಶಾಂತ್ ರಾಜಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಅನೀಶ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ