ಕನ್ನಡ ಸಿನಿಮಾಗಳು ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವಾದ್ಯಂತ ಗಮನ ಸೆಳೆಯುತ್ತಿದೆ. ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಾದ ಕಬ್ಜ ಹಾಗೂ ಮಾರ್ಟಿನ್ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಸಜ್ಜಾಗಿವೆ. ಈಗಾಗಲೇ ಕಬ್ಜ ಹಾಗೂ ಮಾರ್ಟಿನ್ ಚಿತ್ರಗಳು ಕಂಟೆಂಟ್, ಸ್ಟಾರ್ ಕಾಸ್ಟ್, ಅದ್ಧೂರಿ ಮೇಕಿಂಗ್ ವಿಷಯಕ್ಕೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡಿವೆ.
ಪೋಸ್ಟರ್, ಟೀಸರ್ನಿಂದಲೇ ದಕ್ಷಿಣ ಭಾರತದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಮಾರ್ಟಿನ್ ಚಿತ್ರದ ಟೀಸರ್ ನಿನ್ನೆಯಷ್ಟೇ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಜನರು ನೋಡುವ ಮೂಲಕ ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದ ಟಾಪ್ ಮೋಸ್ಟ್ ಸಿನಿಮಾಗಳನ್ನು ಹಿಂದಿಕ್ಕಿ ಟ್ರೇಡಿಂಗ್ನ ಮೊದಲ ಸ್ಥಾನದಲ್ಲಿ ಮಾರ್ಟಿನ್ ಸಿನಿಮಾ ಇರೋದು ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ.
ನಿನ್ನೆಯಷ್ಟೇ ಮಾರ್ಟಿನ್ ಟೀಸರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದವರಿಂದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಒಂದು ಚಾಲೆಂಜಿಂಗ್ ಪ್ರಶ್ನೆ ಎದುರಾಯಿತು. ಈಗಾಗಲೇ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನೀವು ಇಬ್ಬರಲ್ಲಿ ಯಾರಿಗೆ ಕಾಂಪಿಟ್ (ಸ್ಪರ್ಧೆ) ಮಾಡ್ತೀರಾ ಅಂತಾ ಪ್ರಶ್ನೆ ಕೇಳಿದರು. ಈ ಜಟಿಲ ಪ್ರಶ್ನೆಗೆ ಧ್ರುವ ಸರ್ಜಾ ಯೋಚನೆ ಮಾಡಿ ಉತ್ತರಿಸಿದರು.
ಕಿಚ್ಚ ಸುದೀಪ್ ಸರ್ ನನಗಿಂತ ದೊಡ್ಡ ಸ್ಟಾರ್. ಇಂಡಸ್ಟ್ರಿಯಲ್ಲಿ ನನಗಿಂತ ಸೀನಿಯರ್. ಜೊತೆಗೆ ಯಶ್ ಸರ್ ಕೂಡ ನನಗಿಂತ ಇಂಡಸ್ಟ್ರಿಯಲ್ಲಿ ದೊಡ್ಡವರು. ಅವರಿಗೆ ನಾನು ಕಾಂಪಿಟ್ ಮಾಡಲ್ಲ. ಬದಲಾಗಿ ನನಗೆ ನಾನೇ ಕಾಂಪಿಟ್ ಮಾಡಿಕೊಳ್ಳುತ್ತೇನೆ. ಸುದೀಪ್ ಸರ್ ಹಾಗೂ ಯಶ್ ಸರ್ ನನ್ನ ಸಹುದ್ಯೋಗಿಗಳು. ಅವರಿಗೆ ಸ್ಪರ್ಧೆ ಕೊಡುವ ಆಲೋಚನೆ ಇಲ್ಲ ಎಂದು ಜಾಣ್ಮೆಯ ಉತ್ತರ ನೀಡಿದರು.
ಈ ಚಿತ್ರದಲ್ಲಿ ಧ್ರುವ ಸರ್ಜಾ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ದೇಶಭಕ್ತಿ, ಎಮೋಷನ್, ಲವ್ ಸ್ಟೋರಿ ಎಲ್ಲವೂ ಇದೆ. ಮಾರ್ಟಿನ್ ಯಾರು ಅನ್ನೋದು ಈ ಚಿತ್ರದ ಕಥೆ. ಅರ್ಜುನ್ ಸರ್ಜಾ ಮಾರ್ಟಿನ್ ಚಿತ್ರದ ಕಥೆ ಬರೆದಿರೋದು ಈ ಚಿತ್ರರ ಪ್ಲಸ್ ಪಾಯಿಂಟ್. ಇನ್ನೂ ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್, ನಿಕಿತೀನ್ ಧೀರ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಬೆಂಗೂಳೂರು, ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಮಾರ್ಟಿನ್ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ ಟೀಸರ್ ರಿಲೀಸ್: ಧ್ರುವ ಸರ್ಜಾಗೆ ಕಥೆ ಒಪ್ಪಿಸೋದು ತುಂಬಾ ಕಷ್ಟ- ಅರ್ಜುನ್ ಸರ್ಜಾ
ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಬ್ರಹ್ಮಾಚಾರಿ ಚಿತ್ರಗಳನ್ನ ನಿರ್ಮಾಣ ಮಾಡಿರೋ ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಸದ್ಯ ಟೀಸರ್ನಿಂದಲೇ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಮಾರ್ಟಿನ್ ಚಿತ್ರ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ.