ರೌಡಿ, ಡಾನ್, ಲವರ್ ಬಾಯ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಬೇಡಿಕೆ ಇಟ್ಟುಕೊಂಡಿರುವ ನಟ ಡಾಲಿ ಧನಂಜಯ್ 'ರತ್ನನ್ ಪ್ರಪಂಚ', 'ಬಡವ ರಾಸ್ಕಲ್' ಸಿನಿಮಾಗಳ ಸಕ್ಸಸ್ ನಂತರ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ 'Once Upon A Time ಜಮಾಲಿಗುಡ್ಡ' ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಪೋಸ್ಟರ್‌ನಿಂದ ಸದ್ದು ಮಾಡುತ್ತಿರುವ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'ದ ಟೀಸರ್ ನವೆಂಬರ್ 29 ರಂದು ಬಿಡುಗಡೆಯಾಗಲಿದೆ. ಇದು 90ರ ದಶಕದಲ್ಲಿ ನಡೆಯುವ ಕಥೆ. ಬಾರ್ ಸಪ್ಲೈಯರ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ: Once Upon A Time ಜಮಾಲಿಗುಡ್ಡದಲ್ಲಿ ಬಾರ್ ಸಪ್ಲೇಯರ್ ಆದ ಡಾಲಿ ಧನಂಜಯ್
ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ, ಶಿವಮೊಗ್ಗದಲ್ಲಿ ಎಂಬತ್ತು ದಿನಗಳ ಕಾಲ Once Upon A Time ಜಮಾಲಿಗುಡ್ದದ ಚಿತ್ರೀಕರಣ ಮಾಡಲಾಗಿದೆ. ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಕುಶಾಲ್ ಗೌಡ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ಕುಶಾಲ್ ಗೌಡ ಅವರೇ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಸುಂದರ ಕಥಾಹಂದರದ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಡಿಸೆಂಬರ್ 30ರಂದು ಚಿತ್ರ ಬಿಡುಗಡೆಯಾಗಲಿದೆ.