ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಇದೀಗ 'ದೇವರ ಆಟ ಬಲ್ಲವರಾರು' ಚಿತ್ರತಂಡ ಅಂತಹ ಮತ್ತೊಂದು ವಿನೂತನ ಕಾರ್ಯಕ್ಕೆ ಮುಂದಾಗಿದೆ. ಈ ಹಿಂದೆ ನಟ ಸಂಚಾರಿ ವಿಜಯ್ ಅವರ 'ಫಿರಂಗಿ ಪುರ' ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ಧನ್ ಪಿ. ಜಾನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 30 ದಿನಗಳಲ್ಲಿ ಚಿತ್ರದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಬಿಡುಗಡೆ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಈ ಹಿಂದೆ ಗಿನ್ನೆಸ್ ದಾಖಲೆ ವಿಚಾರವಾಗಿ ನಿರ್ದೇಶಕ ಜನಾರ್ಧನ್ ಮಾತನಾಡಿದ್ದರು. "ಚಿತ್ರದ ಎಲ್ಲ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನೆಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಆಸೆ. ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ವಿಶಾಲವಾದ ಜಾಗದಲ್ಲಿ ಸೆಟ್ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ" ಎಂದಿದ್ದರು.
ಅಲ್ಲದೇ, "ದಿನಕ್ಕೆ ಸುಮಾರು 160ಕ್ಕೂ ಹೆಚ್ಚು ಜನರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 16ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ. ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಚಿತ್ರೀಕರಣವಾದ ನಂತರ ಎಲ್ಲ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: 'ನಿಲ್ಲಲೇ ಬೇಕು ಎಲ್ಲ ಧಿಮಾಕು'..ಮಲಯಾಳಂ ಜೊತೆ ಕನ್ನಡದಲ್ಲೂ 'ಧೂಮಂ' ರಿಲೀಸ್
ಅದರಂತೆ, ಮೊದಲ ಹೆಜ್ಜೆಯಾಗಿ ಮಡಿಕೇರಿಯಲ್ಲಿ ಜೂನ್ 19ರ ಬೆಳಗ್ಗೆ 10 ಗಂಟೆಯಿಂದ ಜೂನ್ 20ರ ರಾತ್ರಿ 10 ಗಂಟೆಯವರೆಗೂ ಸತತ 36 ಗಂಟೆಗಳ ಚಿತ್ರೀಕರಣ ನಡೆಸುತ್ತಿದ್ದಾರೆ. ವಿಶಾಲವಾದ ಜಾಗದಲ್ಲಿ 150×80 ವಿಸ್ತಾರವಾದ ಹತ್ತೊಂಬತ್ತು ಅಡಿ ಉದ್ದನೆಯ ಸೆಟ್ ಹಾಕಲಾಗಿದೆ. ಚೆನ್ನೈನ ರಾಷ್ಟ್ರಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಬಾಲಚಂದ್ರನ್ ಹಾಗೂ ತಂಡದವರು ಅದ್ದೂರಿ ಸೆಟ್ ನಿರ್ಮಾಣ ಮಾಡಿದ್ದಾರೆ. 180ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಶನಿ ಧಾರಾವಾಹಿ ಖ್ಯಾತಿಯ ಅರ್ಜುನ್ ರಮೇಶ್ ಹಾಗೂ ಸಿಂಧು ಲೋಕನಾಥ್ ಮುಖ್ಯಭೂಮಿಕೆಯಲ್ಲಿರುವ ದೇವರ ಆಟ ಬಲ್ಲವರಾರು ಚಿತ್ರಕ್ಕೆ ಪ್ರತಿಯೊಬ್ಬ ಮನುಷ್ಯನೊಳಗೆ ಒಂದು ಕ್ರೂರ ಮೃಗ ಇದ್ದೇ ಇರುತ್ತದೆ ಎಂಬ ಅಡಿಬರಹವಿದೆ. ಇದು 1975ರ ಕಾಲಘಟ್ಟದಲ್ಲಿ ನಡೆಯುವ ಕಥೆ.
ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಅರ್ಜುನ್, ಸಿಂಧು ಅಲ್ಲದೇ ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಮುಂತಾದವರು ಅಭಿನಯಿಸಿದ್ದಾರೆ. ಹನುಮಂತರಾಜು ನಿರ್ಮಾಣ ಮಾಡಿದ್ದು, ಲತಾ ರಾಗ ಹಾಗು ಅನಿಲ್ ಜೈನ್ ಸಹ ನಿರ್ಮಾಪಕರು. ಶ್ಯಾನ್ ಎಲ್. ರಾಜ್ ಸಂಗೀತ ನೀಡಿದ್ದು ಹಾಗೂ ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.
ಇದನ್ನೂ ಓದಿ: ಆದಿಪುರುಷ್ ಗಳಿಕೆ ಇಳಿಕೆ: ಮೂರು ದಿನದಲ್ಲಿ 300 ಕೋಟಿ ಗಳಿಸಿದ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್ 20 ಕೋಟಿ!